ಬಂಟ್ವಾಳ: ಜ.4ರಂದು ಚಾಲಕರ ಸಮಾವೇಶ ಆಂಬುಲೆನ್ಸ್ ಲೋಕಾರ್ಪಣೆ.

Coastal Bulletin
ಬಂಟ್ವಾಳ: ಜ.4ರಂದು ಚಾಲಕರ ಸಮಾವೇಶ ಆಂಬುಲೆನ್ಸ್ ಲೋಕಾರ್ಪಣೆ.

ಬಂಟ್ವಾಳ: ಜಿಲ್ಲಾ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ವತಿಯಿಂದ 3ನೇ ವರ್ಷದ ಚಾಲಕರ ಸಮಾವೇಶ ಜ.4ರಂದು ಬೆಳಿಗ್ಗೆ ಗಂಟೆ 9.30ಕ್ಕೆ ಬಂಟ್ವಾಳ ಎಸ್ ಡಿ ಎಂ ಸಭಾಂಗಣದಲ್ಲಿ ನಡೆಯಲಿದ್ದು, ಅಂದು ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನೆ ಸಹಿತ ಆಂಬುಲೆನ್ಸ್ ಲೋಕಾರ್ಪಣೆಗೊಳ್ಳಲಿದೆ ಎಂದು ಯೂನಿಯನ್ ಜಿಲ್ಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗೇಶ ಮಂಗಳೂರು ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡಿನಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ' ಜಿಲ್ಲೆಯಲ್ಲಿ ಸುಮಾರು 1500ಕ್ಕೂ ಮಿಕ್ಕಿ ಮಂದಿ ಸದಸ್ಯರಿದ್ದು, ದುಡಿಮೆ ಜೊತೆಗೆ ವಿವಿಧ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ' ಎಂದರು. ಯಾವುದೇ ಜಾತಿ, ಧರ್ಮ ಮತ್ತು ರಾಜಕೀಯ ಪ್ರೇರಿತ ವ್ಯಕ್ತಿಗಳಿಗಳನ್ನು ಸಂಘಟನೆಯಿಂದ ದೂರ ಇಟ್ಟು ಸಮಾಜದಲ್ಲಿ ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆಯಿಂದ ಬಾಳುವ ಬಗ್ಗೆ ಎಲ್ಲಾ ಸದಸ್ಯರಿಗೂ ಮಾರ್ಗದರ್ಶನ ನೀಡಲಾಗುತ್ತದೆ. 

ಜ.4 ರಂದು ನಡೆಯುವ ಸಮಾವೇಶಕ್ಕೆ ಯೂನಿಯನ್ ಜಿಲ್ಲಾಧ್ಯಕ್ಷ ರಾಜೇಶ್ ಬರೆ ಚಾಲನೆ ನೀಡಲಿದ್ದು, ಗೌರವಾಧ್ಯಕ್ಷ ಸಾಜಿದ್ ಸುಳ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ ನಾಯ್ಕ್ ಉಳಿಪಾಡಿ, ಅಶೋಕ್ ರೈ ಪುತ್ತೂರು, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.

ಇದೇ ವೇಳೆ ಈಶ್ವರ್ ಮಲ್ಪೆ ಸಹಿತ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಮತ್ತು ಆಂಬುಲೆನ್ಸ್ ಲೋಕಾರ್ಪಣೆಗೊಳ್ಳಲಿದೆ ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ಘಟಕ ಅಧ್ಯಕ್ಷ ಇಬ್ರಾಹಿಂ ಖಾಸಿಂ, ಪ್ರಮುಖರಾದ ಮಹಮ್ಮದ್ ಅಲ್ತಾಫ್, ರಹೀಂ ಜೆ., ಸಮೀರ್ ಪರ್ಲಿಯಾ, ಗಣೇಶ್ ಪಿ. ಉಪಸ್ಥಿತರಿದ್ದರು.

Leave a Comment