ವಾಷಿಂಗ್ಟನ್: ಅಮೆರಿಕದ ಸುಪ್ರೀಂ ಕೋರ್ಟ್ ಡೊನಾಲ್ಡ್ ಟ್ರಂಪ್ ಅವರ ಹಿಂದಿನ ಸುಂಕದ ಆದೇಶಗಳನ್ನು ಅಸಿಂಧುಗೊಳಿಸಿದ ಕೆಲವೇ ಗಂಟೆಗಳಲ್ಲಿ, ಅಧ್ಯಕ್ಷರು ಎಲ್ಲಾ ದೇಶಗಳಿಂದ ಬರುವ ಆಮದುಗಳ ಮೇಲೆ ಹೊಸದಾಗಿ ಶೇ. 10ರಷ್ಟು ಸುಂಕವನ್ನು (Tariff) ಹೇರುವ ಕಾರ್ಯನಿರ್ವಾಹಕ ಆದೇಶಕ್ಕೆ ಶನಿವಾರ ಸಹಿ ಹಾಕಿದ್ದಾರೆ.
ತಮ್ಮ 'ಟ್ರೂತ್ ಸೋಶಿಯಲ್' (Truth Social) ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಟ್ರಂಪ್, ಶ್ವೇತಭವನದ ಓವಲ್ ಆಫೀಸ್‌ನಿಂದ ಈ ಆದೇಶಕ್ಕೆ ಸಹಿ ಹಾಕಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. "ಎಲ್ಲಾ ದೇಶಗಳ ಮೇಲೆ ಶೇ. 10ರಷ್ಟು ಜಾಗತಿಕ ಸುಂಕ ವಿಧಿಸುವ ಆದೇಶಕ್ಕೆ ಸಹಿ ಹಾಕಿರುವುದು ನನ್ನ ಪಾಲಿನ ದೊಡ್ಡ ಗೌರವ" ಎಂದು ಅವರು ಬರೆದುಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಮತ್ತು ಪರ್ಯಾಯ ಮಾರ್ಗ
ಅಂತರಾಷ್ಟ್ರೀಯ ತುರ್ತು ಆರ್ಥಿಕ
ಅಧಿಕಾರ ಕಾಯ್ದೆಯನ್ನು (IEEPA) ಬಳಸಿಕೊಂಡು ವ್ಯಾಪಕ ಸುಂಕ ಹೇರುವ ಅಧಿಕಾರ ಅಧ್ಯಕ್ಷರಿಗಿಲ್ಲ ಎಂದು ಸುಪ್ರೀಂ ಕೋರ್ಟ್ 6-3 ಮತಗಳ ಅಂತರದಿಂದ ಶುಕ್ರವಾರ ತೀರ್ಪು ನೀಡಿತ್ತು. ಇದರಿಂದ ಟ್ರಂಪ್ ಅವರ ಆರ್ಥಿಕ ನೀತಿಯ ಮೂಲ ಸ್ತಂಭಕ್ಕೇ ಹೊಡೆತ ಬಿದ್ದಿತ್ತು. ಆದರೆ, ಈಗ ಟ್ರಂಪ್ 1974ರ ವ್ಯಾಪಾರ ಕಾಯ್ದೆಯ 'ಸೆಕ್ಷನ್ 122' ಅನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಈ ಕಾನೂನಿನ ಅಡಿ ಅಧ್ಯಕ್ಷರು 150 ದಿನಗಳವರೆಗೆ ತಾತ್ಕಾಲಿಕ ಸುಂಕವನ್ನು ವಿಧಿಸಬಹುದು. ಇದನ್ನು ವಿಸ್ತರಿಸಲು ಕಾಂಗ್ರೆಸ್‌ನ ಅನುಮೋದನೆ ಅಗತ್ಯವಿರುತ್ತದೆ.













