ಬಂಟ್ವಾಳ :ಫರಂಗಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ₹19.78 ಲಕ್ಷ ನಿವ್ವಳ ಲಾಭ ಗಳಿಸಿದೆ ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ಘೋಷಿಸಲಾಗಿದ್ದು, ಮುಂದಿನ ವರ್ಷ ಕೊಡ್ಮಾಣ್ ಪರಿಸರದಲ್ಲಿ ಸಂಘದ ಹೊಸ ಶಾಖೆ ಆರಂಭಿಸಲು ಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪುಂಚಮೆ ಹೇಳಿದರು.
ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನ ಅಂತ್ಯಕ್ಕೆ ₹20.25 ಕೋಟಿ ಇದ್ದ ಠೇವಣಿ ಪ್ರಸಕ್ತ ಸಾಲಿನ ಅಂತ್ಯಕ್ಕೆ ₹21.11 ಕೋಟಿಗೆ ಏರಿಕೆಯಾಗಿದೆ. ಸಾಲದ ಹೊರಬಾಕಿ ₹10.93 ಕೋಟಿಯಿಂದ ₹10.13 ಕೋಟಿಗೆ ಇಳಿಕೆಯಾಗಿದೆ. ಹೂಡಿಕೆ ₹8.23 ಕೋಟಿಯಿಂದ ₹11.10 ಕೋಟಿಗೆ ಹಾಗೂ ದುಡಿಯುವ ಬಂಡವಾಳ ₹21.74 ಕೋಟಿಯಿಂದ ₹22.73 ಕೋಟಿಗೆ ಹೆಚ್ಚಳವಾಗಿದೆ. ಸಂಘದ ಒಟ್ಟು ವ್ಯವಹಾರ ₹91.44 ಕೋಟಿ ಆಗಿದ್ದು, ಆಡಿಟ್ ವರ್ಗೀಕರಣದಲ್ಲಿ ‘ಬಿ’ ತರಗತಿಯ ಸ್ಥಾನಮಾನ ಪಡೆದಿದೆ ಎಂದರು.
ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಕಮಲಾ ಬಿ. ವರದಿ ವಾಚಿಸಿದರು. ಉಪಾಧ್ಯಕ್ಷ ಪುರುಷೋತ್ತಮ ಅಬ್ಬೆಟ್ಟು ವಂದಿಸಿದರು.
ನಿರ್ದೇಶಕರಾದ ಪಿ. ಸುಬ್ರಹ್ಮಣ್ಯ ರಾವ್ ಹೊಯ್ಗಗದ್ದೆ, ಶೈಲಜಾ ಪಿ. ಶೆಟ್ಟಿ ಕೊಟ್ಟಿಂಜ, ಸಂತೋಷ್ ಕುಮಾರ್ ನೆತ್ತರೆಕೆರೆ, ಪ್ರತಾಪ್ ಕುಮಾರ್ ಆಳ್ವ ಸುಜೀರು, ಜೀವನ ಪ್ರಕಾಶ್ ಡಿ. ಸೋಜ ಬಡ್ಡುರು, ಹರೀಶ್ ಕುಮಾರ್ ಕೊಡ್ಮಾಣ್, ವನಿತಾ ಶೆಟ್ಟಿ ನೀರೊಲ್ಬೆ, ಪ್ರವೀಣ್ ಕೊಡ್ಮಾಣ್, ಸುನಿಲ್ ಫೆರ್ನಾಂಡಿಸ್ ಅಬ್ಬೆಟ್ಟು ಹಾಗೂ ಜಯಾನಂದ ನಾಯಕ್ ಕುಮ್ಮೇಲ್ ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘದ ಅನಾರೋಗ್ಯ ಪೀಡಿತ 17 ಸದಸ್ಯರಿಗೆ ಸಹಾಯಧನ ವಿತರಿಸಲಾಯಿತು.











