ರಿಯಾದ್: ಇಸ್ಲಾಂ ಧರ್ಮದ ಪವಿತ್ರ ನಗರ ಮೆಕ್ಕಾ(Mecca) ಸೇರಿದಂತೆ ಜೆಡ್ಡಾ ಮತ್ತು ತೈಫ್ ಗವರ್ನರೇಟ್‌ಗಳಲ್ಲಿ ಮಂಗಳವಾರ ಸೌದಿ ಅರೇಬಿಯಾ(Saudi Arabia) ನಾಗರಿಕ ರಕ್ಷಣಾ ಇಲಾಖೆ ವೈಮಾನಿಕ ದಾಳಿಯ ಭೀತಿಯಿಂದ ತುರ್ತು ಎಚ್ಚರಿಕೆ (Alert) ಘೋಷಿಸಿದ ಘಟನೆ ನಡೆದಿದೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾ ನಗರದಲ್ಲಿ ಇಂತಹ ವೈಮಾನಿಕ ಎಚ್ಚರಿಕೆಯನ್ನು ಸೈರನ್ ಮೂಲಕ ಮೊಳಗಿಸಲಾಗಿದ್ದು, ಕೆಲವೇ ಹೊತ್ತಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಎಚ್ಚರಿಕೆಯನ್ನು ಹಿಂಪಡೆಯಲಾಯಿತು.
ಯೆಮೆನ್‌ನ ಇರಾನ್ ಬೆಂಬಲಿತ ಹೌತಿ(Houthi) ಬಂಡುಕೋರರು ಇತ್ತೀಚಿನ ದಿನಗಳಲ್ಲಿ ಸೌದಿ ಅರೇಬಿಯಾವನ್ನು ಗುರಿಯಾಗಿಸಿಕೊಂಡು ನಿರಂತರ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.
ಸ್ಥಳೀಯ ಕಾಲಮಾನ ಸಂಜೆ ಸುಮಾರು 6:50ಕ್ಕೆ ಮೆಕ್ಕಾದ ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸಲು ಯತ್ನಿಸುತ್ತಿದ್ದ ಹೌತಿಗಳ ಡ್ರೋನ್(Drone) ಒಂದನ್ನು ಮೆಕ್ಕಾದ ದಕ್ಷಿಣ ಭಾಗದಲ್ಲೇ ಸೌದಿ ವಾಯು ರಕ್ಷಣಾ ಪಡೆ ಹೊಡೆದುರುಳಿಸಿದೆ ಎಂದು ಸೌದಿ ನೇತೃತ್ವದ ಒಕ್ಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಾಲಿಕಿ ತಿಳಿಸಿದ್ದಾರೆ. 2017ರ ಕ್ಷಿಪಣಿ ದಾಳಿಯ ಯತ್ನದ ಬಳಿಕ, ಪವಿತ್ರ ನಗರವನ್ನು ಗುರಿಯಾಗಿಸಲು ಹೌತಿಗಳು ನಡೆಸಿದ ಎರಡನೇ ಪ್ರಯತ್ನ ಇದಾಗಿದೆ ಎಂದು ಅವರು ಹೇಳಿದ್ದಾರೆ.
ವಿಮಾನ ಸಂಚಾರ ಸ್ಥಗಿತ
ಮುನ್ನೆಚ್ಚರಿಕೆಯ ಭಾಗವಾಗಿ ಮದೀನಾದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ಅಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ
ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ದಾಳಿಯ ಭೀತಿ ದೂರವಾದ ಬಳಿಕ ಸೌದಿ ಸಿವಿಲ್ ಡಿಫೆನ್ಸ್ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, “ಮೆಕ್ಕಾ ನಗರದಲ್ಲಿದ್ದ ಅಪಾಯ ತಪ್ಪಿದೆ. ನಾಗರಿಕರು ಸುರಕ್ಷತಾ ಸೂಚನೆಗಳನ್ನು ಪಾಲಿಸಬೇಕು. ಗುಂಪು ಸೇರುವುದು ಮತ್ತು ವಿಡಿಯೋ ಚಿತ್ರೀಕರಣ ಮಾಡುವುದನ್ನು ತಪ್ಪಿಸಿ. ತುರ್ತು ಪರಿಸ್ಥಿತಿಯಲ್ಲಿ 911 ಗೆ ಕರೆ ಮಾಡಿ” ಎಂದು ಮನವಿ ಮಾಡಿದೆ.
ತೀವ್ರಗೊಂಡ ಸಂಘರ್ಷ
ಯೆಮೆನ್‌ನಲ್ಲಿ ಅಂತರ್ಯುದ್ಧ ತೀವ್ರಗೊಂಡ ಬಳಿಕ ಹೌತಿಗಳು ಸೌದಿ ಅರೇಬಿಯಾದ ಮೇಲೆ ಭಾರಿ ಪ್ರಮಾಣದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಮುಂದುವರಿಸಿದ್ದಾರೆ. ಸೌದಿ ತೈಲ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ಹಲವೆಡೆ ಬೆಂಕಿ ಕಾಣಿಸಿಕೊಂಡು 73ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸೋಮವಾರ ಸೌದಿಯ ಖಮಿಸ್ ಮುಶೈತ್, ಅಭಾ ಮತ್ತು ತೈಫ್ ಪ್ರದೇಶಗಳ ಮೇಲೆ ನಡೆದ ದಾಳಿಯಲ್ಲಿ 13 ನಾಗರಿಕರು ಗಾಯಗೊಂಡಿದ್ದು, ಮನೆ ಮತ್ತು ವಾಹನಗಳಿಗೆ ಹಾನಿಯಾಗಿದೆ. ಇದಕ್ಕೆ ಪ್ರತಿಯಾಗಿ ಸೌದಿ ಪಡೆಗಳು ಯೆಮೆನ್‌ನ ತೈಜ್ ನಗರದ ಬಳಿಯ ಬಂಡುಕೋರರ ನೆಲೆಗಳ ಮೇಲೆ ತೀವ್ರ ವೈಮಾನಿಕ ದಾಳಿ ನಡೆಸಿವೆ.













