ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಹತ್ಯೆ: ಒಂಬತ್ತು ತುಂಡುಗಳಾಗಿ ಎರಡು ಬ್ಯಾಗ್‌ಗಳಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ!

Coastal Bulletin
ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಹತ್ಯೆ: ಒಂಬತ್ತು ತುಂಡುಗಳಾಗಿ ಎರಡು ಬ್ಯಾಗ್‌ಗಳಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ!

ಉಡುಪಿ: ಕುಂದಾಪುರ ಮೂಲದ ಆಲ್ವಿನ್ ಪ್ರಕಾಶ್‌ ಕುಂದರ್‌ ಎಂಬುವವರನ್ನು ಶಾರ್ಜಾ(UAE)ದಲ್ಲಿ ಹತ್ಯೆ ಮಾಡಲಾಗಿದೆ ಎಂದು ಅವರ ಸಹೋದರ ಅನಿಲ್‌ ಪ್ರಶಾಂತ್ ಕುಂದರ್‌ ತಿಳಿಸಿದ್ದಾರೆ.

ಪ್ರಕಾಶ್ ಅವರು ಪತ್ನಿ ಟೀನಾ ಹಾಗೂ ಪುತ್ರನೊಂದಿಗೆ ಶಾರ್ಜಾದಲ್ಲಿ ನೆಲೆಸಿದ್ದರು. ಶಾರ್ಜಾ ಏರ್‌ಪೋರ್ಟ್‌ನಲ್ಲಿ 14 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಪ್ರಕಾಶ್ ಅವರನ್ನು, ಜುಲೈ 26ರಂದು ಸಂಪರ್ಕ ಮಾಡಲು ಯತ್ನಿಸಿದ್ದೆ. ಸಾಮಾನ್ಯವಾಗಿ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯಿಸುತ್ತಿದ್ದ ಪ್ರಕಾಶ್, ಈ ಬಾರಿ ಟೆಕ್ಸ್ಟ್ ಮೆಸೇಜ್ ಮೂಲಕ ಮಾತ್ರ ಪ್ರತಿಕ್ರಿಯಿಸಿದ್ದನು. ಮತ್ತೆ ಕರೆ ಮಾಡಿದಾಗಲೂ ಕರೆ ಸ್ವೀಕರಿಸಿಲ್ಲ. ಇದರಿಂದ ಆತಂಕಗೊಂಡ ಸಂಬಂಧಿಕರು ವಿಚಾರಿಸಿದಾಗ, ಪ್ರಕಾಶ್ ಭಾರತಕ್ಕೆ ತೆರಳಿರುವುದಾಗಿ ಅವರು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಮಾಹಿತಿ ದೊರೆತಿತ್ತು.

ಆದರೆ, ಪ್ರಕಾಶ್ ಭಾರತಕ್ಕೆ ಬಂದಿರುವ ಯಾವುದೇ ಮಾಹಿತಿ ಇಲ್ಲವೆಂದು ಕಂಪನಿ ಹೆಚ್ಆರ್ಗೆ ತಿಳಿಸಿದ್ದೆ. ಆಗ ಪರಿಶೀಲಿಸಿದಾಗ ಪಾಸ್ಪೋರ್ಟ್ ಕಂಪನಿಯಲ್ಲಿಯೇ ಇರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಶಾರ್ಜಾದಲ್ಲಿ ಪ್ರಕರಣ ದಾಖಲಿಸಿ, ಪೊಲೀಸರು ಹುಡುಕಾಟ ಆರಂಭಿಸಿದ್ದರು ಎಂದು ಸಹೋದರ ಅನಿಲ್ ಕುಂದರ್ ತಿಳಿಸಿದ್ದಾರೆ.

ಅಲ್ಲಿ ತನಿಖೆ ವೇಳೆ ಆಗಸ್ಟ್ 12ರಂದು ಒಮನ್‌ಗೆ ಹೋಗುವ ಮಾರ್ಗದಲ್ಲಿ ಕಾರಿನಲ್ಲಿ ಒಂಬತ್ತು ತುಂಡುಗಳಾಗಿ ಎರಡು ಬ್ಯಾಗ್‌ಗಳಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅದು ಪ್ರಕಾಶ್‌ನ ಮೃತದೇಹ ಎಂದು ದೃಢಪಟ್ಟಿದೆ. ಅಲ್ಲಿದ್ದ ನಮ್ಮ ಸಂಬಂಧಿಯೊಬ್ಬರೊಂದಿಗೆ ಪ್ರಕಾಶ್ ಡಿಎನ್ಎ ಮ್ಯಾಚ್ ಆಗಿದೆ ಎಂದು ಸಹೋದರ ತಿಳಿಸಿದ್ದಾರೆ.

ಸಂಪರ್ಕಕ್ಕೆ ಸಿಗದ ಪತ್ನಿ: ಮೃತ ಪ್ರಕಾಶ್ ಅವರ ಪತ್ನಿ ಮತ್ತು ಮಗ ಭಾರತಕ್ಕೆ ಬಂದಿರುವುದಾಗಿ ನನಗೆ ಮಾಹಿತಿ ದೊರೆತಿದೆ. ಆದರೆ, ಅವರು ಇದುವರೆಗೂ ಯಾರ ಸಂಪರ್ಕಕ್ಕೆ ಸಿಕ್ಕಿಲ್ಲ. ಇದು ಅನುಮಾನ ಮೂಡಿಸಿದೆ ಎಂದು ಅನಿಲ್‌ ಪ್ರಶಾಂತ್‌ ಹೇಳಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ

ಮಾಡಿದ ಮೃತ ವ್ಯಕ್ತಿಯ ಕುಟುಂಬದವರು, ಪ್ರಕಾಶ್ ಅವರ ಮೃತದೇಹವನ್ನು ಶಾರ್ಜಾದಿಂದ ತುರ್ತಾಗಿ ಭಾರತಕ್ಕೆ ತರಲು ನೆರವು ಕೋರಿದ್ದಾರೆ.

ಎಸ್ಪಿ ಅವರನ್ನು ಭೇಟಿ ಮಾಡಿ ಮನವಿ ಕೊಟ್ಟು ಬಂದಿರುವೆ. ಅಲ್ಲಿನ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ವಿಷಯ ತಿಳಿದುಕೊಂಡು ನ್ಯಾಯ ನೀಡುವುದಾಗಿ ಪೊಲೀಸರು ಭರವಸೆ ಕೊಟ್ಟಿದ್ದಾರೆ. ಸದ್ಯ ನಮಗೆ ಡೆತ್ ಸರ್ಟಿಫಿಕೇಟ್ ಸಿಕ್ಕಿದೆ. ಆದರೆ, ಎಫ್ಐಆರ್ ಸಿಕ್ಕಿಲ್ಲ. ಅದನ್ನು ಆದಷ್ಟು ಬೇಗ ಕಳಿಸಿಕೊಡುವುದಾಗಿ ತಿಳಿಸಿದ್ದಾರೆ. ಆರೋಪಿಗಳು ಯಾರೇ ಆಗಿರಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎನ್ನುವುದು ನಮ್ಮ ಮನವಿಯಾಗಿದೆ.

ಆತನ ಖಾತೆಯಿಂದ ಹಣ ಕೂಡ ಡ್ರಾ ಮಾಡಲಾಗಿದೆ. ಇವರಿದ್ದ ಜಾಗದಲ್ಲಿನ ಸಿಸಿಟಿವಿ ಕ್ಯಾಮರಾವನ್ನು ಪರಿಶೀಲಿಸಿದಾಗ ಎರಡು ಬ್ಯಾಗ್ ಸಹಿತ ಓರ್ವ ಮಹಿಳೆ ಮತ್ತು ಇಬ್ಬರು ಅನಾಮಿಕರು ಕಾಣಿಸಿಕೊಂಡಿದ್ದಾರೆ. ಎರಡು ಬ್ಯಾಗ್ನಲ್ಲಿ ದೇಹವನ್ನು ಕಾರಿನ ಡಿಕ್ಕಿಗೆ ತುಂಬಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂಬ ಮಾಹಿತಿ ನನಗೆ ನೀಡಲಾಗಿದೆ ಎಂದು ಅನಿಲ್ ತಿಳಿಸಿದ್ದಾರೆ.

ಎದೆಗೆ ಚೂರಿ ಹಾಕಿದ್ದಾರೆ. ಈ ವೇಳೆ ಪ್ರಕಾಶ್‌ನ ಕೈಬೆರಳು ಕಟ್ ಆಗಿವೆ. ಕೊಲೆ ಬಳಿಕ ಆತನ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಒಮನ್ಗೆ ಹೋಗುವ ದಾರಿಯಲ್ಲಿ ಬಿಟ್ಟು ಹೋಗಿದ್ದಾರೆ. ಅದು ಪ್ರಕಾಶನದ್ದೇ ಕಾರು ಎಂಬುವುದು ಅಲ್ಲಿನ ವಿಧಿ ವಿಜ್ಞಾನ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೃತರ ಸಹೋದರ ಅನಿಲ್ ಹೇಳಿದ್ದಾರೆ.

ಪೊಲೀಸರ ಪ್ರತಿಕ್ರಿಯೆ: ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಶಾರ್ಜಾ ಪೊಲೀಸ್ ಇಲಾಖೆ ಅಥವಾ ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ/ಕಾನ್ಸುಲೇಟ್ ವತಿಯಿಂದ ಉಡುಪಿ ಜಿಲ್ಲಾ ಪೊಲೀಸರಿಗೆ ಯಾವುದೇ ಅಧಿಕೃತ ಮಾಹಿತಿ ಅಥವಾ ದೃಢೀಕರಣ ಲಭ್ಯವಾಗಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Comment