ಬಂಟ್ವಾಳ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರ ಕಚೇರಿ, ದಕ್ಷಿಣ ಕನ್ನಡ ಹಾಗೂ ತುಂಬೆ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಬಾಲಕ–ಬಾಲಕಿಯರ ಕರಾಟೆ ಸ್ಪರ್ಧೆಯು ಸೆ. 19ರಂದು ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ್ ಶೆಟ್ಟಿ ಬಿ.ಎ. ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯವನ್ನು ವೃದ್ಧಿಸುವುದರ ಜೊತೆಗೆ ಶಿಸ್ತು, ಆತ್ಮವಿಶ್ವಾಸ, ಸಮಯಪ್ರಜ್ಞೆ ಹಾಗೂ ಸವಾಲುಗಳನ್ನು ಎದುರಿಸುವ ಮನೋಭಾವವನ್ನು ಬೆಳೆಸುತ್ತದೆ. ಕರಾಟೆಯಂತಹ ಸಮರಕಲೆಗಳು ವಿದ್ಯಾರ್ಥಿಗಳಲ್ಲಿ ಆತ್ಮರಕ್ಷಣೆ, ಏಕಾಗ್ರತೆ ಹಾಗೂ ಮಾನಸಿಕ ದೃಢತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಶೆಟ್ಟಿ ಅಳಿಕೆ ಮಾತನಾಡಿ, ಕ್ರೀಡೆಯು ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡಾ ಚಟುವಟಿಕೆಗಳು ಅಗತ್ಯ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರ ಜೊತೆಗೆ ಶಿಸ್ತು ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ರಾಹುಲ್ ತೋನ್ಸೆ ಮಾತನಾಡಿ, ಕರಾಟೆ ಕೇವಲ ಕ್ರೀಡೆಯಲ್ಲ; ಅದು ಶಿಸ್ತು, ಏಕಾಗ್ರತೆ, ಆತ್ಮನಿಯಂತ್ರಣ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಸಮಗ್ರ ತರಬೇತಿಯಾಗಿದೆ ಎಂದು ತಿಳಿಸಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಿಸಾರ್ ಅಹಮದ್ ವಳವೂರು ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹಾಗೂ ಕ್ರೀಡಾ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದರು.
ತುಂಬೆ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ (ರಿ) ಅಧ್ಯಕ್ಷರು ಬಿ. ಅಬ್ದುಲ್ ಸಲಾಂ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ತುಂಬೆ ಪದವಿ ಪೂರ್ವ ಕಾಲೇಜಿನ ಕಛೇರಿ ಅಧೀಕ್ಷಕರು ಅಬ್ದುಲ್
ಕಬೀರ್, ಕಾಲೇಜಿನ ನಿವೃತ್ತ ಪ್ರಾಂಶುಪಾಲ ಗಂಗಾಧರ ಆಳ್ವ, ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಮೊಹಮ್ಮದ್ ನದೀಮ್, ಬೋಳಿಯಾರ್ ಇಂಡಿಯನ್ ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ಮೊಹಮ್ಮದ್ ಹನೀಫ್, ರಕ್ಷಕ ಶಿಕ್ಷಕ ಸಂಘದ ಕ್ರೀಡಾ ಕಾರ್ಯದರ್ಶಿ ಅಬ್ದುಲ್ ಗಪೂರ್ ಹಸನ್, ತುಂಬೆ ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಮೋಹಿನಿ ಸುವರ್ಣ, ಸದಸ್ಯರಾದ ಚಂಚಲಾಕ್ಷಿ, ಮ್ಯಾಕ್ಸಿಮ್ ಕುವೆಲ್ಲೊ ಹಾಗೂ ಶರೀಫ್ ವಿಯೆಟ್ನಾಂ, ತುಂಬೆ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ವಿದ್ಯಾ, ಆಂಗ್ಲ ಮಾಧ್ಯಮದ ಮುಖ್ಯೋಪಾಧ್ಯಾಯಿನಿ ಸೌಮ್ಯ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕಿ ಮೋಲಿ ಎಡ್ನಾ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.
ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಕವಿತಾ ಎಂ. ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ಜೆ. ನಾಯಕ್ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರೌಢಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕ ಜಗದೀಶ್ ರೈ ವಂದಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು. ವಿವಿಧ ವಿಭಾಗಗಳಲ್ಲಿ ನಡೆದ ಕರಾಟೆ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯ, ಶಿಸ್ತು, ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಕ್ರೀಡಾ ಪ್ರತಿಭೆಯನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಜಿಲ್ಲಾ ಮಟ್ಟದ ಈ ಕ್ರೀಡಾಕೂಟವು ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ, ಶಿಸ್ತು, ಆತ್ಮವಿಶ್ವಾಸ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವಲ್ಲಿ ಮಹತ್ವದ ವೇದಿಕೆಯಾಯಿತು.
ತುಂಬೆ ವಿದ್ಯಾಸಂಸ್ಥೆಯ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.











