ಭಾರತದ ಮೇಲೆ ಶೇ.100 ಸುಂಕ – ಅಮೆರಿಕ ಸಂಸತ್ತಿನಲ್ಲಿ ಮಸೂದೆ ಮಂಡನೆ

Coastal Bulletin
ಭಾರತದ ಮೇಲೆ ಶೇ.100 ಸುಂಕ – ಅಮೆರಿಕ ಸಂಸತ್ತಿನಲ್ಲಿ ಮಸೂದೆ ಮಂಡನೆ

ವಾಷಿಂಗ್ಟನ್‌: ರಷ್ಯಾದಿಂದ ಕಚ್ಚಾ ತೈಲ (Crude Oil) ಮತ್ತು ಅನಿಲವನ್ನು ಖರೀದಿಸುವ ಭಾರತ(India) ಸೇರಿದಂತೆ ಪ್ರಮುಖ ದೇಶಗಳ ಮೇಲೆ ಶೇಕಡಾ 100 ರಷ್ಟು ಸುಂಕ (Tariff) ವಿಧಿಸಲು ಅಮೆರಿಕದ(US) ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಲಾಗಿದೆ.

ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಈ ಮಸೂದೆಯನ್ನು ಅಂತಿಮ ಮತದಾನಕ್ಕಾಗಿ ಮುಂದೂಡಿದ್ದು, ಇದು ಕಾನೂನಾಗಿ ಜಾರಿಗೆ ಬಂದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತೈಲ ಖರೀದಿಸುವ ದೇಶಗಳ ಮೇಲೆ 100% ತೆರಿಗೆ ವಿಧಿಸುವ ಸಂಪೂರ್ಣ ಅಧಿಕಾರ ಸಿಗಲಿದೆ.

ಇದಕ್ಕೆ ಲಿಂಡ್ಸೆ ಒ. ಗ್ರಾಹಮ್ ಸ್ಯಾಂಕ್ಷನಿಂಗ್ ರಷ್ಯಾ ಆಂಡ್ ಇರಾನ್ ಆಕ್ಟ್ 2026 (Lindsey O. Graham Sanctioning Russia and Iran Act of 2026) ಎಂದು ಹೆಸರಿಡಲಾಗಿದೆ. ಈ ಮಸೂದೆಯು ಈಗಾಗಲೇ ಅಮೆರಿಕದ ಸೆನೆಟ್‌ನಲ್ಲಿ (ಮೇಲ್ಮನೆ) ಭಾರಿ ಬಹುಮತದಿಂದ ಅಂಗೀಕಾರಗೊಂಡಿದೆ.

ಇಬ್ಬರು ಡೆಮಾಕ್ರಟಿಕ್ ಶಾಸಕರು ರಿಪಬ್ಲಿಕನ್ನರ ಪರವಾಗಿ ಮತ ಚಲಾಯಿಸಿದ ನಂತರ ಇದು ಅಂಗೀಕಾರಕೊಂಡಿದೆ. ರಷ್ಯಾ ಮೇಲಿನ ನಿರ್ಬಂಧಗಳ ಮಸೂದೆ ಸೇರಿದಂತೆ ಇತರ ಹಲವು ಶಾಸನಗಳನ್ನು ಮುನ್ನಡೆಸುವ ನಿರ್ಣಯವು 214-211 ಮತಗಳ ಅಂತರದಿಂದ ಅನುಮೋದನೆ ಪಡೆಯಿತು. ಈ ಮಸೂದೆಯು ಬುಧವಾರ ಹೌಸ್‌ನಲ್ಲಿ ಅಂತಿಮ ಮತದಾನಕ್ಕೆ ಬರುವ ಸಾಧ್ಯತೆಯಿದೆ.

ಡೆಮಾಕ್ರಟಿಕ್ ಸಂಸದ ಸ್ಟೆನಿ ಹೋಯರ್ ಮಂಡಿಸಿರುವ ತಿದ್ದುಪಡಿಯ ಪ್ರಕಾರ, ರಷ್ಯಾದಿಂದ ತೈಲ ಖರೀದಿಸುವ ಪ್ರಮುಖ ದೇಶಗಳಾದ ಭಾರತ, ಚೀನಾ, ಟರ್ಕಿ, ಹಂಗೇರಿ, ಸ್ಲೋವಾಕಿಯಾ, ಅಜೆರ್ಬೈಜಾನ್, ಯುಎಇ, ಸಿಂಗಾಪುರ್, ಕಜಾಕಿಸ್ತಾನ್ ಮತ್ತು ಕಿರ್ಗಿಸ್ತಾನ್ ದೇಶಗಳನ್ನು ಈ ಪಟ್ಟಿಯಲ್ಲಿ ಹೆಸರಿಸಲಾಗಿದೆ.

ಉಕ್ರೇನ್(Ukraine) ವಿರುದ್ಧದ ಯುದ್ಧಕ್ಕೆ ತೈಲ ವ್ಯಾಪಾರದಿಂದ ಬರುವ ಹಣವನ್ನೇ ರಷ್ಯಾ(Russia) ಬಳಸುತ್ತಿದೆ ಎಂಬುದು ಅಮೆರಿಕದ ವಾದವಾಗಿದೆ. ಹಾಗಾಗಿ ರಷ್ಯಾದ ಆದಾಯದ ಮೂಲಕ್ಕೆ ಪೆಟ್ಟು ನೀಡಲು ಅದರ ತೈಲ

ಗ್ರಾಹಕರ ಮೇಲೆ ಆರ್ಥಿಕ ಒತ್ತಡ ಹೇರಲಾಗುತ್ತಿದೆ.

ಭಾರತವು ಪ್ರಸ್ತುತ ರಷ್ಯಾದಿಂದ ಅತಿ ಹೆಚ್ಚು ರಿಯಾಯಿತಿ ದರದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಮಸೂದೆ ಕಾನೂನಾದರೆ, ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಟ್ರಂಪ್ ಸರ್ಕಾರ 100% ಸುಂಕ ವಿಧಿಸಬಹುದಾಗಿದೆ.

ಈ ನಿಯಮವು ತಕ್ಷಣವೇ ಜಾರಿಗೆ ಬಂದಿಲ್ಲ. ಈ ಮಸೂದೆಯು ಮೊದಲು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಅಂಗೀಕಾರವಾಗಬೇಕು, ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದಕ್ಕೆ ಸಹಿ ಹಾಕಿ ಕಾನೂನು ಮಾಡಬೇಕು. ಆ ಬಳಿಕವಷ್ಟೇ ಅಧ್ಯಕ್ಷರು ತಮಗೆ ನೀಡಿರುವ ವಿಶೇಷ ಅಧಿಕಾರ ಬಳಸಿ ಭಾರತ ಸೇರಿದಂತೆ ಇತರ ದೇಶಗಳ ಮೇಲೆ ತೆರಿಗೆ ವಿಧಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲಿದ್ದಾರೆ.

ಅಮೆರಿಕ ವಸ್ತುಗಳಿಗೆ ಭಾರತ ಭಾರೀ ತೆರಿಗೆ ವಿಧಿಸುತ್ತದೆ ಎಂದು ಹೇಳಿ ಟ್ರಂಪ್‌ ಆರಂಭದಲ್ಲಿ 25% ಸುಂಕ ವಿಧಿಸಿದ್ದರು. ಬಳಿಕ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ಸುಂಕ ಹೇರಿದ್ದರು. ಪರಿಣಾಮ ಭಾರತದ ಕೆಲ ವಸ್ತುಗಳಿಗೆ 50% ಸುಂಕವನ್ನು ಅಮೆರಿಕ ವಿಧಿಸಿತ್ತು.

ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ಸರ್ಕಾರದ ಹಿಂದಿನ ಕೆಲವು ಸುಂಕಗಳನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿದ ನಂತರ ಸುಂಕ ಇಳಿಕೆಯಾಗಿದೆ. ಟ್ರಂಪ್ ಮತ್ತು ಮೋದಿ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದದ ಬಳಿಕ ಹೆಚ್ಚುವರಿ ದಂಡನಾತ್ಮಕ ಸುಂಕವನ್ನು ರದ್ದುಗೊಳಿಸಿ, ಮೂಲ ಪರಸ್ಪರ ಸುಂಕವನ್ನು 25% ರಿಂದ 18% ಕ್ಕೆ ಇಳಿಸಲು ಅಮೆರಿಕ ಒಪ್ಪಿಕೊಂಡಿದೆ.

Leave a Comment