ಬೆಂಗಳೂರು/ಮೈಸೂರು: ಮುಡಾ ಪ್ರಕರಣದ ರುವಾರಿಯೂ ಆಗಿರುವ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಅವರನ್ನ ಬೆಂಗಳೂರಿನ ಸೈಬರ್ ಪೊಲೀಸರು (Bengaluru Cyber Police) ಬಂಧಿಸಿದ್ದಾರೆ.
ಮುಡಾದ ಮಾಜಿ ಆಯುಕ್ತ ಡಿ.ಬಿ ನಟೇಶ್ (DB Natesh) ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.
ನಟೇಶ್ ನೀಡಿದ ದೂರು ಏನು?
ಇತ್ತೀಚೆಗಷ್ಟೇ ಸ್ನೇಹಮಯಿ ಕೃಷ್ಣ ನಟೇಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಒಂದೂವರೇ ಕೋಟಿ ಹಣ ನೀಡಿ, ನಟೇಶ್ ಮುಂಬಡ್ತಿ
ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಮುಡಾ ಮಾಜಿ ಆಯುಕ್ತ ನಟೇಶ್ ಬೆಂಗಳೂರು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ (Seemanth Kumar Singh) ಅವರಿಗೆ ದೂರು ನೀಡಿದ್ದರು.
ದೂರಿನ ಅನ್ವಯ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು. ಸ್ನೇಹಮಯಿ ಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರು ಸೈಬರ್ ಪೊಲೀಸರು ಇಂದು ಬಂಧಿಸಿದ್ದಾರೆ.













