ದುಬೈ: ಅಬುಧಾಬಿ ಮೇಲೆ ಇರಾನ್ ದಾಳಿ ನಡೆಸಿದೆ. ಈ ದಾಳಿಯ ವೇಳೆ ಕ್ಷಿಪಣಿ ಹಾಗೂ ಡ್ರೋನ್ಗಳ ಅವಶೇಷಗಳು ಬಿದ್ದ ಪರಿಣಾಮ ಶುಕ್ರವಾರ ಅಬುಧಾಬಿ ಎಮಿರೇಟ್‌ನಲ್ಲಿ ಕನಿಷ್ಠ 12 ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ.
ಅಜ್ಬಾನ್ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ನೇಪಾಳದ 6 ಪ್ರಜೆಗಳು ಹಾಗೂ ಭಾರತೀಯ ಐವರು ಪ್ರಜೆಗಳು ಸಣ್ಣಪುಟ್ಟ ಅಥವಾ ಮಧ್ಯಮ ಪ್ರಮಾಣದ ಗಾಯಗಳಿಗೆ ತುತ್ತಾಗಿದ್ದಾರೆ. ನೇಪಾಳಿ ಪ್ರಜೆಯೊಬ್ಬನಿಗೆ ಗಂಭೀರ ಗಾಯಗಳಾಗಿವೆ ಎಂದು ಅಬುಧಾಬಿ ಮಾಧ್ಯಮ ಕಚೇರಿ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ತಡೆಹಿಡಿದ ದಾಳಿಯಿಂದ ಬಿದ್ದ ಅವಶೇಷಗಳಿಂದ ಉಂಟಾದ ಬೆಂಕಿಯ ಪರಿಣಾಮವಾಗಿ ಶುಕ್ರವಾರ ಅಬುಧಾಬಿ ಎಮಿರೇಟ್‌ನಲ್ಲಿರುವ ಅನಿಲ ಸಂಕೀರ್ಣದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಸರ್ಕಾರಿ ಮಾಧ್ಯಮ ಕಚೇರಿ ಮಾಹಿತಿ ನೀಡಿದೆ.
ಹಬ್ಶಾನ್ ಅನಿಲ ಸೌಲಭ್ಯಗಳಲ್ಲಿ ಅವಶೇಷಗಳು ಬಿದ್ದ ಘಟನೆಯನ್ನು ವಾಯು ರಕ್ಷಣಾ ವ್ಯವಸ್ಥೆಗಳು ಯಶಸ್ವಿಯಾಗಿ ತಡೆದ ನಂತರ, ಅಬುಧಾಬಿ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಕಿ ನಂದಿಸಲು ಅಲ್ಲಿನ ಆಡಳಿತ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಅನಿಲಾಗಾರದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಯಾವುದೇ ಸಾವುಗಳು ವರದಿಯಾಗಿಲ್ಲ ಎಂದು ಎಮಿರೇಟ್‌ನ ಮಾಧ್ಯಮ ಕಚೇರಿ X ಪೋಸ್ಟ್ ನಲ್ಲಿ ತಿಳಿಸಿದೆ.
ಮತ್ತೊಂದು ಕಡೆ ಇರಾನ್ ಇಸ್ರೇಲ್ ಮೇಲೆ ಭಾರಿ ದಾಳಿಯನ್ನು ಮಾಡಿದೆ. ಇಸ್ರೇಲ್‌ನ ಪ್ರಮುಖ ನಗರಗಳ
ವಿವಿಧ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ಬೃಹತ್ ಕ್ಷಿಪಣಿ ದಾಳಿಗಳನ್ನು ಮುಂದುವರೆಸಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC)ಆಪರೇಷನ್ ಟ್ರೂ ಪ್ರಾಮಿಸ್ 4ರ ಅಲೆ 91ರ ಭಾಗವಾಗಿ ಭಾರಿ ಪ್ರಮಾಣದ ವೈಮಾನಿಕ ದಾಳಿ ನಡೆಸಿದೆ. ನಿರ್ದಿಷ್ಟವಾಗಿ ಟೆಲ್ ಅವಿವ್ ಮತ್ತು ಹೈಫಾ ನಗರಗಳ ಹೃದಯಭಾಗವನ್ನು ಟಾರ್ಗೆಟ್ ಮಾಡಲಾಗಿದೆ ಎಂದು ವರದಿಯಾಗಿದೆ.
ನಮ್ಮ ದಾಳಿಯ ಈ ನಗರಗಳ ಅಪಾರ ಜನಸಂಖ್ಯೆಯ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಸುಮಾರು 5 ಮಿಲಿಯನ್ ಇಸ್ರೇಲಿಗರು ಭೂಗತ ಬಂಕರ್‌ಗಳಲ್ಲಿ ಆಶ್ರಯ ಪಡೆಯಬೇಕಿದೆ. ಇಸ್ರೇಲ್‌ನ ಎಲ್ಲೆಡೆ ಸೈರನ್‌ಗಳು ಮೊಳಗುತ್ತಿವೆ ಎಂದು ಐಆರ್‌ಜಿಸಿ ಹೇಳಿಕೆ ಬಿಡುಗಡೆ ಮಾಡಿದೆ.
ಇನ್ನೊಂದೆಡೆ, ಯೆಮೆನ್ ಪಡೆ ಕೂಡ ದಕ್ಷಿಣ ಇಸ್ರೇಲ್ ಪ್ರದೇಶಗಳು ಮತ್ತು ಡಿಮೋನಾ ಕಡೆಗೆ ದಾಳಿಗಳನ್ನು ನಡೆಸಿದೆ ಎಂದು ಹೇಳಿದೆ. ಯೆಮೆನ್‌ನ ಅನ್ಸರುಲ್ಲಾದ ಮಿಲಿಟರಿ ವಕ್ತಾರರೊಬ್ಬರು ಮಾತನಾಡಿ, ಇರಾನ್‌ನ ಪಡೆಗಳು ಮತ್ತು ಹಿಜ್ಬುಲ್ಲಾ ಸೇರಿಕೊಂಡು ಟೆಲ್ ಅವೀವ್‌ನ ಜಾಫಾ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿವೆ ಎಂದು ತಿಳಿಸಿದ್ದಾರೆ. ಇದು ಸಂಘಟಿತ ದಾಳಿ ಎಂದು ಅವರು ಒತ್ತಿ ಹೇಳಿದ್ದಾರೆ.















