ಬಂಟ್ವಾಳ: ಆರೋಗ್ಯ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 38ನೇ ಸಂಭ್ರಮಾಚರಣೆಯ ಪ್ರಯುಕ್ತ 14ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಎ.24 ರಂದು ಪುಂಜಾಲಕಟ್ಟೆಯ ಬಂಗ್ಲೆ ಮೈದಾನದಲ್ಲಿ ಜರಗಲಿದೆ ಎಂದು ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ತಿಳಿಸಿದ್ದಾರೆ.
ಕ್ಲಬ್‌ನ ಕಚೇರಿಯಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಸಾಮೂಹಿಕ ವಿವಾಹದ ಪ್ರಯುಕ್ತವಾಗಿ ಎ.23 ರಂದು ಸಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ ಎಂದರು.ಎ.24ರಂದು ಬೆಳಗ್ಗೆ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಿಂದ ವಧು-ವರರ ದಿಬ್ಬಣವು ವೈಭವಪೂರ್ಣವಾದ ಮೆರವಣಿಗೆಯಲ್ಲಿ ಸಾಗಿ ಬಂದು ಮದುವೆ ಮಂಟಪದಲ್ಲಿ ಸಂಪನ್ನಗೊಳ್ಳಲಿದ್ದು,
ಗುರುವಾಯನಕೆರೆ ಕೃಷ್ಣಭಟ್ ಅವರ ಪೌರೋಹಿತ್ಯದಲ್ಲಿ 11 ಗಂಟೆಯ ಶುಭ ಮುಹೂರ್ತದಲ್ಲಿ 20 ಜೋಡಿ ವಧು-ವರರು ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪೆದುಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಡಾಜೆಗುತ್ತು ರವಿಶಂಕರ ಶೆಟ್ಟಿ ಹಾಗೂ ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ಅವರು ವಧುವಿಗೆ ಮಂಗಲಸೂತ್ರ ವಿತರಿಸಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ "ಸ್ವಸ್ತಿ ಸಿರಿ"ರಾಜ್ಯ ಪ್ರಶಸ್ತಿ ಮತ್ತು" ಸ್ವಸ್ತಿಕ್ ಸಂಭ್ರಮ" ಪುರಸ್ಕಾರ ಮಾಡಲಾಗುವುದು ಏಂದು ಅವರು ತಿಳಿಸಿದರು.
ಸಭಾಕಾರ್ಯಕ್ರಮವನ್ನು ರಾಜ್ಯದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಲಿರುವರು. ಶ್ರೀ
ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಆಶೀರ್ವಚನ ನೀಡಲಿರುವರು. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಲಿದ್ದು,ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರು ಸ್ವಸ್ತಿಸಿರಿ ಪ್ರಶಸ್ತಿ ಪ್ರದಾನ ಮಾಡಲಿರುವರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡುವರು. ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಮಧ್ಯಾಹ್ನ ಸಾಮೂಹಿಕ ವಿವಾಹದ ಪ್ರಯುಕ್ತ ಭೋಜನ ಏರ್ಪಡಿಸಲಾಗಿದೆ. ಸಂಜೆ ಮಂತ್ರ ದೇವತೆ ಕ್ರಿಯೇಶನ್ಸ್ ಅವರ ನಿರ್ಮಾಣದ "ಚಂದ್ರನ್ "ಕಿರು ಚಿತ್ರ ಬಿಡುಗಡೆ, ಕುದ್ರೋಳಿ ಗಣೇಶ್ ಅವರಿಂದ ಮಸ್ತ್ ಮ್ಯಾಜಿಕ್ ಹಾಗೂ ತುಳುನಾಟಕ ನಡೆಯಲಿದೆ ಎಂದರು.
ಕ್ಲಬ್‌ನ ಅಧ್ಯಕ್ಷರಾದ ಪ್ರಶಾಂತ್ ಪುಂಜಾಲಕಟ್ಟೆ, ಪದಾಧಿಕಾರಿಗಳಾದ ಜಯರಾಜ್ ಅತ್ತಾಜೆ, ರಾಜೇಶ್ ಪಿ. ಬಂಗೇರ, ಪ್ರಭಾಕರ ಪಿ.ಎಂ.,ಕುಶಾಲಪ್ಪ,ರಪೀಕ್ ಮೊದಲಾದವರು ಉಪಸ್ಥಿತರಿದ್ದರು.
ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ: ಲ| ಸುಧಾಕರ ಆಚಾರ್ಯ(ಉದ್ಯಮ),ಅರ್ಜುನ್ ಭಂಡಾರ್ಕರ್(ಸಮಾಜ ಸೇವೆ), ರವಿ ಕಟಪಾಡಿ(ಕಲೆ), ರಾಜೇಂದ್ರ ಕಂರ್ಬಡ್ಕ(ಉದ್ಯಮ)
ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರಶಸ್ತಿ : ಎಂ.ಡಿ.ವೆಂಕಪ್ಪ(ಜನಪದ), ನಾರಾಯಣ ನಾವುಡ(ಸಮಾಜಸೇವೆ),ರಮೇಶ್.ಕೆ. ಪುಣಚ(ಪತ್ರಿಕೋದ್ಯಮ),ಆಪ್ತಿ ಬಿ.ಪೂಜಾರಿ(ಕಲೆ),ಯಶವಂತ ಸ್ನೇಹಗಿರಿ(ಕಲೆ), ಹಾಗೂ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ಅತ್ಯುತ್ತಮ ಸಂಘಟನೆ).














