Coastal Bulletin

ಬಂಟ್ವಾಳ, ನುಡಿದಂತೆ ನಡೆಯಲು ಸಾಧ್ಯ ಇರುವ ಭರವಸೆಗಳನ್ನು ಮಾತ್ರ ಬಡವರ ಪರ, ಜನಸಾಮಾನ್ಯರ ಪರ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷ ನೀಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅಬ್ದುಲ್ ಜಬ್ಬಾರ್ ಹೇಳಿದರು.

ಆವರು ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯ 4ನೇ ದಿನ ಮಾವಿನಕಟ್ಟೆ ಜಂಕ್ಷನ್ನಿನಲ್ಲಿ ಫೆ.14 ಮಂಗಳವಾರ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸರಳ-ಸಜ್ಜನ ರಾಜಕಾರಣಿ ರಮಾನಾಥ ರೈ ಅವರನ್ನು ಮತ್ತೊಮ್ಮೆ ಗೆಲ್ಲಿಸಿ, ಜಾತ್ಯತೀತ ಸರಕಾರಕ್ಕೆ ಬೆಂಬಲ ನೀಡಿ ಎಂದರು .

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ,ಕಳೆದ ಬಾರಿ ಅಪಪ್ರಚಾರದಿಂದ ನನ್ನನ್ನು ಸೋಲಿಸಿದ್ದಕ್ಕಾಗಿ ಬೇಸರವಿದೆ, ಆದರೂ ವರ್ಷಪೂರ್ತಿ ಜನರ ಮಧ್ಯೆ ಇದ್ದು ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿದ್ದೇನೆ. ಕೊರೋನಾ ಕಾಲದಲ್ಲೂ ಪಕ್ಷದ ಎಲ್ಲ ವಲಯಗಳ ಪ್ರಮುಖರ ಸಹಕಾರ ಪಡೆದು ಇಂದಿರಾ ಕ್ಷೇಮ ನಿಧಿ ಮೂಲಕ ರೇಶನ್ ಕಿಟ್ ವಿತರಿಸಲಾಗಿದೆ ಎಂದರು. 

ಬಂಟ್ವಾಳ ಕ್ಷೇತ್ರದ ಜನ ಆರು ಬಾರಿ ಗೆಲ್ಲಿಸಿದ್ದೀರಿ. ಮೂರು ಬಾರಿ ಮಂತ್ರಿಯಾಗಲು ಸಹಕಾರ ನೀಡಿದ್ದೀರಿ. ನಿಮ್ಮ ಋಣ ತೀರಿಸಲು ಸಾಧ್ಯ ಆಗದಿದ್ದರೂ ಕ್ಷೇತ್ರದ ಜನ ತಲೆ ತಗ್ಗಿಸುವ ಕೆಲಸವಂತೂ ಮಾಡಿಲ್ಲ ಎಂಬ ತೃಪ್ತಿ-ಸಂತೃಪ್ತಿ ಇದೆ. ಸಿದ್ದಾಂತದಲ್ಲಿ ರಾಜಿ ಮಾಡುವ ಕೀಳುಮಟ್ಟದ

ರಾಜಕೀಯ ಯಾವತ್ತೂ ರಮಾನಾಥ ರೈ ಮಾಡಿಲ್ಲ. ಎಂದ ರಮಾನಾಥ ರೈ ಎಂಎಲ್ಸಿ ಆಗುವ ಅವಕಾಶವನ್ನು ಪಕ್ಷದ ನಾಯಕರು ನೀಡಿದ್ದರು, ಕ್ಷೇತ್ರದ ಜನರನ್ನು ನಂಬಿ ಮತ್ತೆ ಚುನಾವಣಾ ಕಣಕ್ಕೆ ಬಂದಿದ್ದೇನೆ. ಜನ ಮತ್ತೆ ಕೈ ಹಿಡಿಯುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ನಮ್ಮ ಸರಕಾರದ ಅವಧಿಯ ಅನುದಾನದಲ್ಲಿ ಕಳೆದ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಎಲ್ಲ ದೀರ್ಘದೃಷ್ಟಿಯ ಕೆಲಸ-ಕಾಮಗಾರಿಗಳನ್ನು ಪೂರ್ಣಗೊಳಿಸುವ ಭರವಸೆ ನೀಡುತ್ತೇನೆ. ಅಜಿಲಮೊಗರು-ಕಡೇಶ್ವಾಲ್ಯ ಸೌಹಾರ್ದ ಸೇತುವೆ, ಬೆಂಜನಪದವು ಕ್ರೀಡಾಂಗಣ, ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆ, ಬಿ ಸಿ ರೋಡಿನ ಅಂಬೇಡ್ಕರ್ ಭವನ, ಬಂಟ್ವಾಳದ ಪಂಜೆಮಂಗೇಶರಾಯರ ಭವನ ಇತ್ಯಾದಿ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿದರು. 

ಈ ಸಂದರ್ಭ ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಪಕ್ಷ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಎಂ ಅಬ್ಬಾಸ್ ಅಲಿ, ಸದಾಶಿವ ಬಂಗೇರ, ಪದ್ಮಶೇಖರ್ ಜೈನ್, ಶಾಹುಲ್ ಅಮೀದ್, ಮಾಯಿಲಪ್ಪ ಸಾಲ್ಯಾನ್,ಲವೀನಾ ವಿಲ್ಮಾ ಮೋರಸ್, ಸುದರ್ಶನ್ ಜೈನ್,ಸುರೇಶ ಕುಮಾರ್ ನಾವೂರ,ರಾಜೀವ್ ಶೆಟ್ಟಿ ಎಡ್ತುರು,ಮೊದಲಾದವರು ಭಾಗವಹಿಸಿದ್ದರು

Leave a Comment