ಬಂಟ್ವಾಳ :ತಾಲ್ಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಪಚ್ಚೇರುಪಲ್ಕೆ ಎಂಬಲ್ಲಿ ಪುರಾತನ ಶಿವಲಿಂಗ ಸೋಮವಾರ ಪತ್ತೆಯಾಗಿದ್ದು ಭಕ್ತರು ಸೀಯಾಳ ಅಭಿಷೇಕ ಸಲ್ಲಿಸಿ ಸಂತಸಪಟ್ಟರು.
ಇಲ್ಲಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಕಾಪು ಗುಡ್ಡ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಶಿವಾಲಯದ ಕುರುಹು ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಭಕ್ತರು ಒಟ್ಟು ಸೇರಿ ಭಜನೆ ನಡೆಸುತ್ತಿದ್ದು, ಇದೀಗ ಇಲ್ಲಿಗೆ ಸಮೀಪದಲ್ಲೇ ಸೋಮವಾರ ಪುರಾತನ ಶಿವಲಿಂಗವೊಂದು ಪತ್ತೆಯಾಗಿ ಭಕ್ತರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಈಚೆಗಷ್ಟೇ ನಡೆಸಿದ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಸುಮಾರು 1,418 ವರ್ಷಗಳ ಪುರಾತನ ಹಿನ್ನೆಲೆ ಹೊಂದಿರುವ ಶಿವಾಲಯವು ಸುಮಾರು 744 ವರ್ಷ ವೈಭವದಿಂದ ಉತ್ಸವಾದಿಗಳು ನಡೆದು ಬಳಿಕ ಸುಮಾರು 578 ವರ್ಷಗಳಿಂದ ಪಾಳು ಬಿದ್ದಿರುವುದು ಭಕ್ತರ ಗಮನಕ್ಕೆ ಬಂದಿತ್ತು. ಇದಕ್ಕಾಗಿ ಸೋಮವಾರ ಸ್ಥಳೀಯ ಪಚ್ಚೇರುಪಲ್ಕೆ ರಾಮಣ್ಣ ಮೂಲ್ಯ ಎಂಬವರ ಜಮೀನಿನಲ್ಲಿ ಉತ್ಕನನ ನಡೆಸಿದಾಗ ಈ ಶಿವಲಿಂಗ ಪತ್ತೆಯಾಗಿದೆ. ಈ
ಸಂದರ್ಭದಲ್ಲಿ ಅಪಾರ ಮಂದಿ ಭಕ್ತರು ಶಿವಲಿಂಗಕ್ಕೆ ಸೀಯಾಳ ಅಭಿಷೇಕ ನಡೆಸಿ ಸಂತಸಪಟ್ಟರು.
ವೇಣೂರು ಅಜಿಲಸೀಮೆ ಮಾಗಣೆಗೆ ಸಂಬಂಧಪಟ್ಟ 4 ಶಿವಕ್ಷೇತ್ರಗಳ ಪೈಕಿ ಈ ಶಿವಾಲಯ ಕೂಡಾ ಒಂದು. ಇಲ್ಲಿನ ಅಜ್ಜಿಬೆಟ್ಟು, ಚೆನ್ನೈತ್ತೋಡಿ, ಪಿಲಿಮೊಗರು, ಕುಡಂಬೆಟ್ಟು, ಮೂಡುಪಡುಕೋಡಿ, ಪಿಲಾತಬೆಟ್ಟು, ಇರ್ವತ್ತೂರು ಹೀಗೆ 7 ಗ್ರಾಮಗಳ ಭಕ್ತರ ಆರಾಧನಾ ಕ್ಷೇತ್ರವಾಗಿದೆ ಎಂದು ದೇವಳದ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರಕಾಶ್ಚಂದ್ರ ಆಳ್ವ ವಾಂಬೆಟ್ಟು ತಿಳಿಸಿದ್ದಾರೆ.
ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯ ಮಾರ್ಗದರ್ಶನದಲ್ಲಿ ಶಿವಲಿಂಗಕ್ಕೆ ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಸಚಿವ ಬಿ.ರಮಾನಾಥ ರೈ ಸ್ಥಳಕ್ಕೆ ಭೇಟಿ ನೀಡಿದರು.
27ರಂದು ಬಾಲಾಲಯ ಪ್ರತಿಷ್ಠೆ: ಇದೇ 26ರಂದು ಸಂಜೆ ಗಂಟೆಗೆ ಶಿವಲಿಂಗವನ್ನು ಮೆರವಣಿಗೆಯಲ್ಲಿ ತಂದು ಇದೇ 27ರಂದು ಬಾಲಾಲಯ ಪ್ರತಿಷ್ಠೆ ನೆರವೇರಿಸಲು ತೀರ್ಮಾನಿಸಿರುವುದಾಗಿ ಭಕ್ತರು ತಿಳಿಸಿದ್ದಾರೆ.













