ಬಂಟ್ವಾಳ :ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ವಾರ್ಷಿಕ ಮಹಾಸಭೆ, ಸಾಧಕರಿಗೆ ಸನ್ಮಾನ ಹಾಗೂ ನೂತನ ಸಭಾ ಭವನದ 3ಡಿ ಅನಾವರಣ ಕಾರ್ಯಕ್ರಮಗಳು ಸೆ.6ರಂದು ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಸಭಾ ಭವನದಲ್ಲಿ ನಡೆಯಿತು.
ನೂತನ ಸಭಾ ಭವನದ 3ಡಿ ಅನಾವರಣಗೊಳಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ,ಶಾಸಕರಿಗೆ ಬರುವ ಅನುದಾನ ಬಳಕೆಯ ನಿಯಮ ಸರಳೀಕರಣಗೊಳಿಸಿ, ಸಭಾ ಭವನಗಳಿಗೂ ನೀಡಬಹುದು ಎನ್ನುವಂತಾದರೆ ಕುಲಾಲ ಭವನಕ್ಕೆ ರೂ.15 ಲಕ್ಷ ಅನುದಾನ ನೀಡಲಾಗುವುದು ಸಂಘಕ್ಕೆ ಜಾಗ ಗುರುತಿಸಿಕೊಟ್ಟರೆ ಅದನ್ನು ಮಂಜೂರುಗೊಳಿಸಿ ಕೊಡಲಾಗುವುದು ಎಂದರು, ಸಂಘ ಸಂಸ್ಥೆಗಳಿಗೆ ಜಮೀನು ನೀಡುವ ವಿಚಾರದಲ್ಲಿ ಮುಖ್ಯಮಂತ್ರಿಗಳ ಜೊತೆ ಈಗಾಗಲೇ ಚರ್ಚಿಸಿದ್ದು, ಪಕ್ಷಾತೀತವಾಗಿ ಎಲ್ಲಾ ಸಮಾಜಗಳಿಗೂ ಮಿತ ದರದಲ್ಲಿ ಕನಿಷ್ಠ ಅರ್ಧದಿಂದ ಒಂದು ಏಕರೆ ತನಕ ಜಾಗ ಮಜೂರು ಮಾಡುವುದು ಹಾಗೂ ಸರಕಾರಿ ಜಾಗದಲ್ಲಿರುವ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳನ್ನು ದೇವರ ಹೆಸರಿಗೆ ಆರ್‌ಟಿಸಿಮಾಡಿ ಕೊಡುವ ಬಗ್ಗೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಾಸಕರು ಹೇಳಿದರು.
ರಾಜ್ಯ ಸಹಕಾರಮಹಾ ಮಂಡಲದ ನಿರ್ದೇಶಕ ಶಶಿಕುಮಾರ್ ರೈ ಬಾಲ್ಗೊಟ್ಟು ಮಾತನಾಡಿ, ಗುಡಿಕೈಗಾರಿಕೆಗಳ ಮೂಲಕ ಸಮಾಜದ ಬೆಳವಣಿಗೆಗೆ ಸಹಕಾರ ನೀಡುತ್ತಿರುವ ರಾಜ್ಯದ ಪ್ರಥಮ ಸಂಘವಾಗಿರುವ ಕುಂಬಾರರ ಗುಡಿ ಕೈಗಾರಿಕಾ ಸಂಘವು ಹಲವಾರು ಶಾಖೆಗಳನ್ನು ಸ್ಥಾಪಿಸಿ ಉತ್ತಮ ರೀತಿಯಲ್ಲಿ ವ್ಯವಹಾರ ನಿರತವಾಗಿದೆ. ಸಹಕಾರಿ ಕ್ಷೇತ್ರದ ಉತ್ತಮ ಸಾಧನೆಗಾಗಿ ಸಾಧನಾ ಪ್ರಶಸ್ತಿ ಪಡೆದಿದೆ ಎಂದು ಹೇಳಿ, ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ಮಾತನಾಡಿ, ಕಳೆದ ಮಹಾಸಭೆಯಲ್ಲಿ ತಿಳಿಸಿದಂತೆ ರೂ.100 ಕೋಟಿಯಿಂದ ಠೇವಣಿ 173 ಕೋಟಿಗೆ ಹೆಚ್ಚಿಸುವ ಮೂಲಕ ಪ್ರಗತಿ ಸಾಧಿಸಿದೆ. ಸಂಘದ ಲಾಭಾಂಶದಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ, ಕುಂಬಾರಿಕೆ ವೃತ್ತಿ ಮಾಡುವವರಿಗೆ 60 ವರ್ಷದ ನಂತರ ಮಾಸಾಶನ, ಕುಂಬಶ್ರೀ ಸಾಲಸಮನ್ವಯ ನಿಧಿಯ ಮೂಲಕ, ಮೃತಪಟ್ಟ ಸಾಲಗಾರರ ಸಾಲ ಸಂಪೂರ್ಣ ಮನ್ನಾ, ಡಿವಿಡೆಂಡ್ ಠೇವಣಿಗೆ ಸಮಾನವಾದ ಠೇವಣಿಯದ್ದಾಗ ಮಾತ್ರ ಡಿವಿಡೆಂಡ್ ನೀಡಲಾಗುವುದು ಎಂದರು. ಕೌಡಚ್ಚಾರಿನಲ್ಲಿ ರೂ.2 ಕೋಟಿ ವೆಚ್ಚದಲ್ಲಿ ಕುಂಬಶ್ರೀ ಸಹಕಾರ ಭವನ ನಿರ್ಮಾಣಗೊಳ್ಳಲಿದೆ. ಸಭಾಭವನಕ್ಕೆ ರೂ.1 ಲಕ್ಷ ಮೇಲ್ಪಟ್ಟುದೇಣಿಗೆ ನೀಡಿದ ದಾನಿಗಳಿಗೆ ಒಂದು ಕಾರ್ಯಕ್ರಮಕ್ಕೆ ಸಭಾ ಭವನವನ್ನು ಉಚಿತವಾಗಿ ನೀಡಲಾಗುವುದು ಅಲ್ಲದೆ ಅವರ ಭಾವಚಿತ್ರವನ್ನು ಸಭಾಭವನದಲ್ಲಿ ಅನಾವರಣಗೊಳಿಸಲಾಗುವುದು. ಸಿಬ್ಬಂದಿಗಳಶ್ರೇಯೋಭಿವೃದ್ಧಿಗಾಗಿ ತುಟ್ಟಿಭತ್ತೆಯನ್ನುಶೇ.30ಕ್ಕೆ ಏರಿಕೆ ಮಾಡಿ ವೇತನದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗುವುದು. ಬೆಳ್ಳಾರೆಯ ಸ್ವಂತ ಜಮೀನಿನಲ್ಲಿ ಶೀಘ್ರ ಸ್ವಂತ ಕಟ್ಟಡ ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗುವುದು.ಸಹಕಾರ ಸಂಘದಿಂದ ಪ್ರಗತಿ ಎಂಬ ಭಾವನೆಯಿಂದ ಸಾಲ ಪಡೆಯಲು ಬರುವಾಗ ಇರುವ ನಗುಮುಖ ಸಾಲ ಹಿಂತಿರುಗಿಸುವಾಗಲೂ ಇರಲಿ ಎಂದ ಅಧ್ಯಕ್ಷರು, ನೀಡಿದ ಸಾಲ ಹಿಂಪಡೆಯುವ ವಿಚಾರದಲ್ಲಿ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು,
ಒಟು ರೂ.851 ಕೋಟಿ ವ್ಯವಹಾರ ನಡೆಸಿ ರೂ.3.02,36,700 ಲಾಭ ಪಡೆದಿದೆ.ಕಳೆದ ಮಹಾಸಭೆಯಲ್ಲಿ ತಿಳಿಸಿದಂತೆ ಈ ಬಾರಿ ಡಿವಿಡೆಂಡ್ 1 ಪರ್ಸೆಂಟ್ ಏರಿಕೆ ಮಾಡಿದ್ದು ಸದಸ್ಯರಿಗೆ ಶೇ.19 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ಘೋಷಣೆ ಮಾಡಿದರು.
ನಿರ್ದೇಶಕರಾದ ಗಣೇಶ್ ಪಿ., ಪದ್ದಕುಮಾರ್ ವಿಂಚ್., ಪೂವಪ್ಪ ಕಡಂಬಾರು, ಸೇಸಪ್ಪ ಕುಲಾಲ್, ಪ್ರಶಾಂತ್ ಬಂಜನ್, ನಾಗೇಶ್ ಕುಲಾಲ್, ರೇಖಾ ದಿನೇಶ್ ಹಾಗೂ ರಂಜಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ಶಾಸಕ ಅಶೋಕ್ ಕುಮಾರ್ ರೈ, ವೈದ್ಯಕೀಯ ಮತ್ತು ಸಮಾಜ ಸೇವೆಯಲ್ಲಿ ಮಹಾವೀರ ಮೆಡಿಕಲ್ ಸೆಂಟರ್ ಡಾ.ಸುರೇಶ್ ಪುತ್ತೂರಾಯ, ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕರಾಗಿ ಆಯ್ಕೆಯಾದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ,ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿರುವ ಶಶಿಕುಮಾರ್ ರೈ ಬಾಳ್ಕೊಟ್ಟು,ಚೀಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಚಿಲ್ಯರು, ಉದ್ಯಮಿ ಮೋಹನ್ ಚೇಂಗ್ಲ, ನಿವೃತ್ತ ಯೋಧ ಮೋಹನ್ ಕಡಂಬಾರು, ಕಲಾವಿದೆ ಜ್ಯೋತಿ ಕುಲಾಲ್, ಚಾರ್ಟಡ್್ರ ಅಕೌಂಟೆಂಟ್ ದೀಕ್ಷಾ ಡಿ.ಬಿ.. ಶೈಕ್ಷಣಿಕ ಸಾಧನೆಗೆ ವಿವೇಕಾನಂದ ಪದವಿ ಕಾಲೇಜಿನ ಗಣಿತ ಶಾಸ್ತ್ರ ಉಪನ್ಯಾಸಕಿ ವಿದ್ಯಾ, ದ್ವಿತೀಯ ಪಿಯುಸಿಯಲ್ಲಿ ರಾಜ್ಯದಲ್ಲಿ ಐದನೇ ರಾಂಕ್ ಪಡೆದ ಐಶ್ವರ್ಯ, ಕುಂಬಾರಿಕೆ ಕುಶಲಕರ್ಮಿ ಸೇಸಪ್ಪ ಮೂಲ್ಯ ಕೌಡುಚ್ಚಾರು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಟೇಬಲ್ ಟೆನ್ನಿಸ್‌ನಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಈಶಾ ಅನ್ವಿ ಅವರನ್ನು ಅಭಿನಂದಿಸಲಾಯಿತು. ವಿಜಯ ಅವರಿಗೆ ಪಿಂಚಣಿ ಪತ್ರವನ್ನು ವಿತರಿಸಲಾಯಿತು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಸೇರಿದಂತೆ ಹಲವು ಪ್ರಮುಖರು ಮಹಾಸಭೆಯಲ್ಲಿ ಭಾಗವಹಿಸಿದ್ದರು. ಸದಸ್ಯರಾದ ಯಶವಂತ ವಿಟ್ಲ, ರಾಧಾಕೃಷ್ಣ, ರಾಮಚಂದ್ರ ನೇರಳಕಟ್ಟೆ, ವಸಂತ ಮೂಲ್ಯ ಮೊದಲಾದವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಸಂಘದ ತಾಂತ್ರಿಕ ಸಿಬ್ಬಂದಿ ರಮೇಶ್ ಕುಲಾಲ್ ಕುಂಬಾರಿಕೆಯ ಪ್ರಾತ್ಯಕ್ಷಿಕೆ ನೀಡಿದರು. ಮಹಾಸಭೆಯಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಸದಸ್ಯರು ಭಾಗವಹಿಸಿದ್ದು ಭಾಗವಹಿಸಿದ ಎಲ್ಲಾ ಸದಸ್ಯರಿಗೂ ಕುಂಬಾರಿಕೆಯ ಉತ್ಪನ್ನಗಳ ಗಿಫ್ಟ್ ನೀಡಲಾಯಿತು.
ಸಂಘದ ಉಪಾಧ್ಯಕ್ಷ ದಾಮೋದರ ಕುಲಾಲ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜನಾರ್ದನ ಮೂಲ್ಯ ವಂದಿಸಿದರು. ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು.ಸಿಬ್ಬಂದಿಗಳಾದ ಸುಜಾತ, ಭವಾನಿ, ಗಣೇಶ್, ಸುಕನ್ಯಾ, ಹರೀಶ್, ಜಯಲಕ್ಷ್ಮೀ, ಚೇತನ್, ಯಶಸ್ವಿನಿ ಸನ್ಮಾನಿತರ ಪರಿಚಯ ಮಾಡಿದರು. ಸಿಬ್ಬಂದಿಗಳು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನೆರವೇರಿತು.















