ನೆತ್ತರಕೆರೆ :ಎಡುವೆಂಚರ್ ಪದವಿ ಪೂರ್ವ ಕಾಲೇಜಿನಲ್ಲಿ"ವಂದೇ ಗುರುಚರಣಂ" ಶಿಕ್ಷಕರ ದಿನಾಚರಣೆ.

Coastal Bulletin
ನೆತ್ತರಕೆರೆ :ಎಡುವೆಂಚರ್ ಪದವಿ ಪೂರ್ವ ಕಾಲೇಜಿನಲ್ಲಿ"ವಂದೇ ಗುರುಚರಣಂ" ಶಿಕ್ಷಕರ ದಿನಾಚರಣೆ.

ಬಂಟ್ವಾಳ:ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆ ಎಡುವೆಂಚರ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ‘ವಂದೇ ಗುರುಚರಣಂ’ ಎಂಬ ಅರ್ಥಪೂರ್ಣ ಶೀರ್ಷಿಕೆಯಡಿ ಗೌರವ, ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಸುದೀರ್ಘ ಶೈಕ್ಷಣಿಕ ಸೇವೆ ಸಲ್ಲಿಸಿರುವ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಪಿ.ಎಸ್ ಅವರನ್ನು ಶಿಕ್ಷಕರ ದಿನಾಚರಣೆಯ ಅಂಗವಾಗಿ ಸನ್ಮಾನಿಸಲಾಯಿತು. ನಂತರ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು,ಶಿಕ್ಷಕ ವೃತ್ತಿಯ ಮಹತ್ವ, ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಗುರುಗಳ ಪಾತ್ರ ಹಾಗೂ ಸಮಾಜದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜವಾಬ್ದಾರಿಯ ಕುರಿತು ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು. ಶಿಕ್ಷಕ ವೃತ್ತಿಯು ಕೇವಲ ಉದ್ಯೋಗವಲ್ಲ; ಅದು ಪೀಳಿಗೆಯನ್ನು ರೂಪಿಸುವ ಮಹತ್ತರ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಕುಟುಂಬದ ಏಳಿಗೆಗೆ ಮಮತೆ, ತ್ಯಾಗ ಮತ್ತು ಸಮರ್ಪಣೆಯಿಂದ ಬದುಕಿದ ನೀಲವೇಣಿ ಎಸ್. ರೈ ಹಾಗೂ ಆಶ್ರಿತಾ ರಮಾನಂದ ಶೆಟ್ಟಿ ಅವರನ್ನು ಮಾತೃಶಕ್ತಿಯ ಪ್ರತೀಕವಾಗಿ ಗೌರವಿಸಲಾಯಿತು.

ಕಾಲೇಜಿನ ಅಧ್ಯಕ್ಷ ಅಮೃತ್ ರೈ ಅವರು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ

ಶಿಕ್ಷಕರ ಮಹತ್ವ ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅವರ ಜವಾಬ್ದಾರಿಯನ್ನು ವಿವರಿಸಿದರು. ಸಂಸ್ಥೆಯ ಕಾರ್ಯದರ್ಶಿ ರಕ್ಷಿತಾ ಅಮೃತ್ ರೈ ಅವರು ಶಿಕ್ಷಣದೊಂದಿಗೆ ಸಂಸ್ಕಾರ, ಮೌಲ್ಯ ಮತ್ತು ಮಾನವೀಯ ಗುಣಗಳನ್ನು ಬೆಳೆಸುವ ಅಗತ್ಯವನ್ನು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಮಹೇಶ್ ಕೆ. ಎನ್. ಅವರು ಶಿಕ್ಷಕರ ಸಮರ್ಪಣೆ, ಶಿಸ್ತು ಹಾಗೂ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದರು.

ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಸಮಸ್ತ ಶಿಕ್ಷಕ ಬಂಧುಗಳಿಗೆ ಗೌರವಾರ್ಪಣೆ ಸಲ್ಲಿಸಿ, ಅವರ ನಿಸ್ವಾರ್ಥ ಸೇವೆ ಹಾಗೂ ಶೈಕ್ಷಣಿಕ ಸಮರ್ಪಣೆಗೆ ಕೃತಜ್ಞತೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟಿಗಳು, ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಸಾಯನ ಶಾಸ್ತ್ರ ಉಪನ್ಯಾಸಕಿ ಅರ್ಚನಾ ಎಸ್.  ಸ್ವಾಗತಿಸಿದರು. ಭೌತಶಾಸ್ತ್ರ ಉಪನ್ಯಾಸಕಿ  ದೀಕ್ಷಾ ಐ. ಧನ್ಯವಾದ ಸಮರ್ಪಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಆಚಾರ್ಯ  ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment