Coastal Bulletin

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಂಗಳವಾರದಿಂದ(ಜು.27)ಸೇವೆಗಳು ಪುನರಾರಂಭಗೊಳ್ಳಲಿದ್ದು ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕವು ಜು.29 ಗುರುವಾರದಿಂದ ಪ್ರಾರಂಭಗೊಳ್ಳಲಿದೆ.

ಈ ಬಗ್ಗೆ ದೇವಸ್ಥಾನ ಪ್ರಕಟಣೆ ಹೊರಡಿಸಿದ್ದು ಸರಕಾರದ ಕೋವಿಡ್ ಮಾರ್ಗಸೂಚಿಗೆ ಅನುಗುಣವಾಗಿ ಶ್ರೀ ದೇವಳದಲ್ಲಿ ಸೇವೆಗಳನ್ನು ನೆರವೇರಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 6.30ರಿಂದ ಮಧ್ಯಾಹ್ನ 1.30ರ ತನಕ ಬಳಿಕ ಮಧ್ಯಾಹ್ನ 3.30ರಿಂದ ರಾತ್ರಿ 8.30 ಗಂಟೆ ತನಕ ಭಕ್ತರಿಗೆ ದೇವರ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಂಗಳವಾರದಿಂದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಪಂಚಾಮೃತ ಮಹಾಭಿಷೇಕ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಆರಂಭವಾಗಲಿದೆ. ಭಕ್ತರಿಗೆ ಭೋಜನ ಪ್ರಸಾದ ವಿತರಣೆ ಆರಂಭವಾಗಲಿದೆ. ದೇವಳದ ವಸತಿ ಗೃಹಗಳಲ್ಲಿ ತಂಗಲು ಅವಕಾಶ ನೀಡಲಾಗಿದೆ. ಲಡ್ಡು, ಪಂಚ ಕಜ್ಜಾಯ ಪ್ರಸಾದ, ತೀರ್ಥ ಬಾಟ್ಲಿ ವಿತರಣೆ ಆರಂಭಗೊಳ್ಳಲಿದೆ.

ಜು.29 ಗುರುವಾರದಿಂದ ದೇವಳದ ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಮಹಾಭಿಷೇಕ ಸೇವೆಗಳು ಆರಂಭಗೊಳ್ಳಲಿದೆ. ಈ ಸೇವೆಯನ್ನು ನೆರವೇರಿಸುವ ಸೇವಾರ್ಥಿಗಳು ಕನಿಷ್ಠ ಕೋವಿಡ್ ಪ್ರಥಮ ಡೋಸ್ ಲಸಿಕೆ ಪಡೆದಿರಬೇಕು ಮತ್ತು ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿದ ವರದಿ ಹಾಜರು ಪಡಿಸಬೇಕು. ಈ

ಸೇವೆಗಳ ಪ್ರತಿ ಟಿಕೇಟಿಗೆ 2 ಭಕ್ತರಿಗೆ ಮಾತ್ರ ಸೇವೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಸರ್ಪಸಂಸ್ಕಾರ ಸೇವೆಯು ಗುರುವಾರದಿಂದ ಪ್ರತಿದಿನ ಎರಡು ಬ್ಯಾಚ್‌ನಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಒಂದನೇ ಸರದಿ ಹಾಗೂ ಎರಡನೇ ಸರದಿಯು 10 ಗಂಟೆಗೆ ಆರಂಭಗೊಳ್ಳಲಿದೆ. ಪ್ರತಿ ದಿನ 4 ಸರದಿಯಲ್ಲಿ ಒಟ್ಟು 240  ಭಕ್ತರಿಗೆ ಆಶ್ಲೇಷ ಬಲಿ ಸೇವೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ ಗಂಟೆಯಿಂದ 6 ಗಂಟೆ ತನಕ, 8.15ರಿಂದ 9.30 ತನಕ, 9.೪45 ರಿಂದ 11.45ರ ತನಕ ಹಾಗೂ ಸಂಜೆ 5 ಗಂಟೆಯಿಂದ 6.30ತನಕ ಸೇವೆ ನಡೆಯಲಿದೆ. ಪ್ರತಿ ಸರದಿಯಲ್ಲಿ 60 ಭಕ್ತರಂತೆ ೪ಸರದಿಯಲ್ಲಿ 240 ಭಕ್ತರು ಸೇವೆ ನೆರವೇರಿಸಲು ಅವಕಾಶ ನೀಡಲಾಗಿದೆ. ನಾಗಪ್ರತಿಷ್ಠೆ ಸೇವೆ ದಿನ ಒಂದಕ್ಕೆ 25 ಸೇವಾ ರಶೀದಿಗೆ ಅವಕಾಶ ನೀಡಲಾಗಿದೆ. ಪ್ರತಿ ದಿನ 3 ಭಕ್ತರಿಗೆ ಪಂಚಾಮೃತ ಮಹಾಭಿಷೇಕ ಸೇವೆ ನೆರವೇರಿಸಲು ಅವಕಾಶ ನೀಡಲಾಗಿದೆ ಎಂದು ದೇವಳ ಪ್ರಕಟನೆ ನೀಡಿದೆ.

Leave a Comment