Coastal Bulletin

ಮಂಗಳೂರು:ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಆರೋಪ ಸಾಬೀತಾದ ಹಿನ್ನೆಲೆ ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಟೌನ್ ಪ್ಲಾನಿಂಗ್ ಆಫೀಸರ್ ಬಿ.ಪಿ. ಶಿವರಾಜು ಅವರಿಗೆ 5 ವರ್ಷ ಶಿಕ್ಷೆ ಮತ್ತು ರೂ. 34,00,000/- ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ದಿನಾಂಕ 25-07-2007 ರಂದು ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಟೌನ್ ಪ್ಲಾನಿಂಗ್ ಆಫೀಸರ್ ಬಿ.ಪಿ. ಶಿವರಾಜು ರವರು ತಮ್ಮ ಸೇವಾ ಅವಧಿಯಲ್ಲಿ ನಿಗದಿತ ಆದಾಯಕ್ಕಿಂತಲೂ ಮೀರಿ ಹೆಚ್ಛಿನ ಆಸ್ತಿಗಳನ್ನು ಹೊಂದಿದ್ದಾರೆಂದು ಆಗಿನ ಲೋಕಾಯುಕ್ತ ಇನ್ಸ್ಪೆಕ್ಟರ್ ಪ್ರಸನ್ನ ವಿ. ರಾಜು ಮಾಹಿತಿ ಕಲೆ ಹಾಕಿದ್ದು, ಆಗಿನ ಲೋಕಾಯುಕ್ತ ಉಪಾಧೀಕ್ಷಕರು ಮತ್ತು ಅವರ ತಂಡ ಕೇಸು ದಾಖಲಿಸಿ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದರು. ಸುಮಾರು 38,00,000 ರೂ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾದ ಬಗ್ಗೆ ವರದಿಯಾಗಿತ್ತು. ತನಿಖೆಯನ್ನು ಪೂರ್ಣಗೊಳಿಸಿ ಡಿ.ವೈ. ಎಸ್.ಪಿ. ಆಗಿದ್ದ ಡಾ. ಪ್ರಭುದೇವ್ ಮಾಣೆ ರವರು ಆರೋಪಿ ಶಿವರಾಜು ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್. ಎನ್. ರಾಜೇಶ್ ರವರ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ

ಎಂದು ತೀರ್ಮಾನಕ್ಕೆ ಬಂದಿದ್ದು, ಹದಿನೇಳು ಲಕ್ಷದಷ್ಟು ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಸೇವೆಗೆ ಸೇರಿದ ವರ್ಷದಿಂದ ದಾಳಿ ನಡೆದ ದಿನಾಂಕದವರೆಗೆ ಆರೋಪಿ ಹೊಂದಿದ್ದ ಎಂದು ಮಾನ್ಯ ನ್ಯಾಯಾಲಯದಲ್ಲಿ ಸಾಬೀತಾದ ಹಿನ್ನಲೆಯಲ್ಲಿ ಮಾನ್ಯ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ.

ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಬಿ. ಜಕಾತಿ ರವರು ದಿನಾಂಕ 26-07-2021 ರಂದು ಶಿಕ್ಷೆ ಪ್ರಕಟಿಸಿದ್ದಾರೆ.ಆಪರಾಧಿಗೆ 5 ವರ್ಷ ಸಾದಾ ಸಜೆ ಮತ್ತು ರೂ 34,00,000/-ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಸಜೆ ವಿಧಿಸಿದರು. ಈ ಆದೇಶ ಭ್ರಷ್ಟಾಚಾರಿಗಳಲ್ಲಿ ನಡುಕ ಹುಟ್ಟಿಸಿದೆ.ಆಪರಾಧಿಯನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.

ಮಂಗಳೂರು ಲೋಕಾಯುಕ್ತ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ, ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್  ವಾದಿಸಿದ್ದರು.ಅಭಿಯೋಜನೆಯ ಪರವಾಗಿ 27 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಹಾಗೂ 160 ದಾಖಲೆಗಳನ್ನು ಹಾಜರು ಪಡಿಸಲಾಗಿತ್ತು.

Leave a Comment