ಬೆಂಗಳೂರು:ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮರುನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ ಇದ್ದಾಗ ಖೇಲ್ ರತ್ನ ಪ್ರಶಸ್ತಿ ಆರಂಭಿಸಿದ್ದರು. ಬಿಜೆಪಿ ದುರುದ್ದೇಶದಿಂದ ಹೆಸರು ಬದಲಾವಣೆ ಮಾಡಿದೆ. ಧ್ಯಾನ್ ಚಂದ್ ಹೆಸರಲ್ಲಿ ಇನ್ನೂ ದೊಡ್ಡ ಪ್ರಶಸ್ತಿ ನೀಡಿ. ರಾಜೀವ್ ಗಾಂಧಿ ಹೆಸರು ಬದಲಾವಣೆ ಬೇಡ ಎಂದು ಆಗ್ರಹಿಸಿದ್ದಾರೆ. ಗುಜರಾತ್‌ನಲ್ಲಿ ಮೋದಿ ಕ್ರೀಡಾಂಗಣವಿದೆ. ದೆಹಲಿಯಲ್ಲಿ ಅರುಣ್ ಜೇಟ್ಲಿ ಹೆಸರಿನಲ್ಲಿ ಕ್ರೀಡಾಂಗಣವಿದೆ. ದೀನ್ ದಯಾಳ್ ಉಪಾಧ್ಯಾಯ ಹೆಸರಲ್ಲಿ ಮೇಲ್ಸೇತುವೆ ಇದೆ.ವಾಜಪೇಯಿ ಹೆಸರಲ್ಲಿ ಅನೇಕ ಯೋಜನೆಗಳಿವೆ. ಅವುಗಳನ್ನ ನಾವು ಬದಲಾವಣೆ ಮಾಡಿದ್ವಾ ಎಂದು ಪ್ರಶ್ನಿಸಿದ್ದಾರೆ.ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇನ್ನು, ಯಡಿಯೂರಪ್ಪಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸರ್ಕಾರ ವೆಚ್ಚ
ಕಡಿಮೆ ಮಾಡಬೇಕು ಆದ್ರೆ, ದುಂದು ವೆಚ್ಚ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಆದ್ರೀಗ ಯಡಿಯೂರಪ್ಪ ಸಂಪುಟ ದರ್ಜೆ ಸ್ಥಾನಮಾನ ತಿರಸ್ಕಾರ ಮಾಡಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ದಾರೆ. ನಾನೇ ಹೇಳಬೇಕು ಎಂದುಕೊಂಡಿದ್ದೆ. ಅಷ್ಟರಲ್ಲಿ ಅವರೇ ತಿರಸ್ಕಾರ ಮಾಡಿದ್ದು ಒಳ್ಳೆಯದೇ ಆಯಿತು ಎಂದಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ.ಯಾವಾಗ ಏನು ಬೇಕಾದ್ರು ಆಗಬಹುದು ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಖಾತೆ ಹಂಚಿಕೆಯಲ್ಲಿ ಅಸಮಾಧಾನಗೊಂಡಿರುವ ಸಚಿವರು ನೇರವಾಗಿ ಸಿಎಂ ವಿರುದ್ದ ಮುನಿಸಿಕೊಂಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದಾಗಲೂ ಬಿಜೆಪಿಯಲ್ಲಿ ಅಸಮಾಧಾನವಿತ್ತು. ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಿದಾಗಲೂ ಅಸಮಾಧಾನ ಶುರುವಾಗಿದೆ. ಹಾಗಾಗಿ ಯಾವಾಗ ಏನ್ ಬೇಕಾದ್ರು ಆಗಬಹುದು. ಯಾವತ್ತಾದರೂ ಒಂದು ದಿನ ಸ್ಫೋಟವಾಗಬಹುದು ಎಂದಿದ್ದಾರೆ.















