ಬೆಂಗಳೂರು: ನಮ್ಮ ಭಾರತೀಯ ಚಿತ್ರಗಳಲ್ಲಿ ಅದರಲ್ಲೂ ಬಾಲಿವುಡ್ ಚಿತ್ರಗಳಲ್ಲಿ ಭಾರತವನ್ನು ಕೆಟ್ಟದಾಗಿ, ಕೇವಲವಾಗಿ ತೋರಿಸಿ, ಹೊರ ದೇಶಗಳಲ್ಲಿ ತೋರಿಸಿ ಅವಾರ್ಡ್ ಗೆದ್ದುಕೊಂಡು ಬಂದಿರುವುದನ್ನು ನಾನು ಗಮನಿಸಿದ್ದೇನೆ ಎಂದು ಹೇಳಿಕೆ ನೀಡಿರುವ ರಾಷ್ಟ್ರ ಪ್ರಶಸ್ತಿ ವಿಶೇತ ನಟ ರಿಷಬ್ ಶೆಟ್ಟಿ ವಿರುದ್ಧ ನಟ ಚೇತನ್ ಅಹಿಂಸಾ ಅಸಮಾಧಾನ ಹೊರಹಾಕಿದ್ದಾರೆ. ಇಡೀ ಚಲನಚಿತ್ರೋದ್ಯಮವನ್ನು ಖಂಡಿಸುವುದು ಅಜ್ಞಾನವಾಗಿದೆ ಎಂದು ರಿಷಬ್ ಶೆಟ್ಟಿ ಹೇಳಿಕೆಯನ್ನು ವಿರೋಧಿಸಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ಚೇತನ್ ಅಹಿಂಸಾ, ಬಾಲಿವುಡ್ ಭಾರತವನ್ನು ಕೆಟ್ಟದಾಗಿ ತೋರಿಸುತ್ತದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಕೆಲವು ಚಲನಚಿತ್ರಗಳಲ್ಲಿ ಪ್ರಸ್ತುತಪಡಿಸಲಾದ ಸಿದ್ಧಾಂತವನ್ನು ನೀವು ಒಪ್ಪುವುದಿಲ್ಲ ಎಂದು ಇಡೀ ಚಲನಚಿತ್ರೋದ್ಯಮವನ್ನು ಖಂಡಿಸುವುದು ಅಜ್ಞಾನವಾಗಿದೆ.
ವಾಣಿಜ್ಯಿಕವಾಗಿ ಯಶಸ್ವಿಯಾದ ಚಲನಚಿತ್ರಗಳನ್ನು ನಿರ್ದೇಶಿಸುವುದು ಮತ್ತು ಸಮಾಜದ ಬಗ್ಗೆ ಒಳನೋಟವುಳ್ಳ ಆಲೋಚನೆಗಳನ್ನು ಹೊಂದಿರುವುದು ಎರಡು ಸಂಪೂರ್ಣವಾಗಿ ವಿಭಿನ್ನ ವಿಷಯಗಳು ಎಂಬುದನ್ನು ಈ ಹೇಳಿಕೆಯು ಮತ್ತೊಮ್ಮೆ ಸಾಬೀತುಪಡಿಸುತ್ತದೆ ಎಂದು ರಿಷಬ್ ಶೆಟ್ಟಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ರಿಷಬ್
ಶೆಟ್ಟಿ ಹೇಳಿದ್ದೇನು..?
ಮೆಟ್ರೋ ಸಾಗ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ರಿಷಬ್ ಶೆಟ್ಟಿ, ಸಮಾಜದಲ್ಲಿರುವ ಆಗುಹೋಗುಗಳ ಬಗ್ಗೆ ಗಮನಿಸಬೇಕು. ಸಿನಿಮಾ ನನ್ನ ವೃತ್ತಿ ಆಗಿರುವುದರಿಂದ ಇದರ ಮೂಲಕ ಸಮಾಜಕ್ಕೆ ಉಪಯೋಗವಾಗುವ ಕೆಲಸ ಮಾಡುವ ಅವಕಾಶ ನನಗೆ ಇದೆ. ಏನೇ ಮಾಡಲು ಒಂದು ರೀತಿ- ನೀತಿ ಅಂತಾ ಇರುತ್ತದೆ. ನಮ್ಮ ಭಾರತೀಯ ಚಿತ್ರಗಳಲ್ಲಿ ಅದರಲ್ಲೂ ಬಾಲಿವುಡ್ ಚಿತ್ರಗಳಲ್ಲಿ ಭಾರತವನ್ನು ಕೆಟ್ಟದಾಗಿ, ಕೇವಲವಾಗಿ ತೋರಿಸಿ, ಹೊರ ದೇಶಗಳಲ್ಲಿ ತೋರಿಸಿ ಅವಾರ್ಡ್ ಗೆದ್ದುಕೊಂಡು ಬಂದಿರುವುದನ್ನು ನಾನು ಗಮನಿಸಿದ್ದೇನೆ ಎಂದಿದ್ದರು.















