ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾಕ್ಕೆ ಸಂಕಷ್ಟಗಳ ಸರಮಾಲೆ ಮುಗಿಯುತ್ತಲೇ ಇಲ್ಲ. ಇಂದು (ಜನವರಿ 09)ಕ್ಕೆ ಬಿಡುಗಡೆ ಆಗಬೇಕಿದ್ದ ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನಿರಾಕರಿಸಿ, ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸಿತ್ತು. ಇದಕ್ಕೆ ಆಕ್ಷೇಪಿಸಿ, ‘ಜನ ನಾಯಗನ್’ ಸಿನಿಮಾದ ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆದು ಇಂದು (ಜನವರಿ 09) ಬೆಳಿಗ್ಗೆ ಮದ್ರಾಸ್ ಹೈಕೋರ್ಟ್ನ ಏಕಸದಸ್ಯ ಪೀಠ ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡುವಂತೆ ಸಿಬಿಎಫ್ಸಿಗೆ ಆದೇಶಿಸಿತ್ತು, ಆದರೆ ಈಗ ಮಧ್ಯಾಹ್ನದ ವೇಳೆಗೆ ಸ್ವತಃ ಮದ್ರಾಸ್ ಹೈಕೋರ್ಟ್, ತನ್ನದೇ ಆದೇಶಕ್ಕೆ ತಡೆ ನೀಡಿದ್ದು, ಪ್ರಮಾಣ ಪತ್ರ ನೀಡುವಿಕೆ ತಾತ್ಕಾಲಿಕವಾಗಿ ಬೇಡ ಎಂದಿದೆ.
ತಮಿಳಗ ಮಕ್ಕಳ್ ಕಚ್ಚಿ’ ರಾಜಕೀಯ ಪಕ್ಷದ ಸಂಸ್ಥಾಪಕರೂ ಆಗಿರುವ ನಟ ವಿಜಯ್ ನಟಿಸಿರುವ ‘ಜನ ನಾಯಗನ್’ ಸಿನಿಮಾನಲ್ಲಿ ಸಾಕಷ್ಟು ರಾಜಕೀಯ ಅಂಶಗಳಿದ್ದು, ಇದೇ ಕಾರಣಕ್ಕೆ ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿದ್ದು, ಇದು ರಾಜಕೀಯ ನಡೆ ಎನ್ನಲಾಗುತ್ತಿದೆ. ಆದರೆ ನ್ಯಾಯಾಲಯವು ಮಧ್ಯ ಪ್ರವೇಶಿಸಿ, ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡುವಂತೆ ಮಾಡಿತ್ತು. ಆದರೆ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಮತ್ತೆ ಮರು ಆದೇಶ ಹೊರಡಿಸಿ, ಪ್ರಮಾಣ ಪತ್ರವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಇದೆಲ್ಲ ಪ್ರಕ್ರಿಯೆಗಳು ವಿಜಯ್ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ವಿಜಯ್ ವಿರುದ್ಧ ರಾಜಕೀಯ ಕುತಂತ್ರದ ಭಾಗವಾಗಿ ಇದೆಲ್ಲ ನಡೆಯುತ್ತಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ನ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲಾಗಿದ್ದು, ‘ಸಿನಿಮಾದ ನಿರ್ಮಾಪಕರು, ಸಿನಿಮಾ ಬಿಡುಗಡೆಯ ಕಾರಣ ನೀಡಿ ನ್ಯಾಯಾಲಯದ
ಮೇಲೆ ಒತ್ತಡ ಹೇರಿದ್ದರು ಹಾಗಾಗಿ ಪ್ರಕರಣ ಸೂಕ್ತ ವಿಚಾರಣೆ ನಡೆದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದೀಗ ಪ್ರಕರಣದ ಮುಂದಿನ ವಿಚಾರಣೆಯನ್ನು ಇದೇ ತಿಂಗಳು 21ಕ್ಕೆ ಮುಂದೂಡಿದೆ. ಆ ಮೂಲಕ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಮತ್ತೆ ಅನಿಶ್ಚತತೆಗೆ ಒಳಗಾಗಿದೆ.
ವಿಜಯ್ ವಿರುದ್ಧ ರಾಜಕೀಯ ಕುತಂತ್ರದ ಭಾಗವಾಗಿಯೇ ‘ಜನ ನಾಯಗನ್’ ಸಿನಿಮಾಕ್ಕೆ ಸಮಸ್ಯೆ ಕೊಡಲಾಗುತ್ತಿದೆ ಎನ್ನಲಾಗುತ್ತಿದೆ. ‘ಜನ ನಾಯಗನ್’ ಸಿನಿಮಾ ಮತ್ತು ಸಿಬಿಎಫ್ಸಿ ನಡೆಯುತ್ತಿರುವ ಈ ವಿವಾದ ಈಗಾಗಲೇ ರಾಜಕೀಯ ತಿರುವು ತೆಗೆದುಕೊಂಡಿದೆ. ಕಾಂಗ್ರೆಸ್ ಪಕ್ಷ ವಿಜಯ್ಗೆ ಬೆಂಬಲ ಸೂಚಿಸಿದ್ದು, ಒಂದು ಸಿನಿಮಾವನ್ನು ಹೀಗೆ ತಡೆಯುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದಿದೆ.
ಇದೀಗ ಮುಂದಿನ ವಿಚಾರಣೆ ಜನವರಿ 21ಕ್ಕೆ ನಡೆಯುವ ಕಾರಣ ಅಲ್ಲಿಯವರೆಗೆ ಸಿನಿಮಾ ಬಿಡುಗಡೆ ಆಗುವುದು ಅಸಾಧ್ಯ ಎಂದಾಗಿದೆ. ಅಲ್ಲದೆ, ಜನವರಿ 21ಕ್ಕೆ ವಿಚಾರಣೆ ನಡೆದು ಮತ್ತೆ ಆದೇಶ ಕಾಯ್ದಿರಿಸಿದರೆ ಸಿನಿಮಾ ಬಿಡುಗಡೆ ಮತ್ತಷ್ಟು ತಡವಾಗಲಿದೆ.










