ನಟ ಆಮಿರ್ ಖಾನ್ ಅವರಿಗೆ ಸದ್ಯಕ್ಕೆ ಯಾಕೋ ಟೈಮ್ ಚೆನ್ನಾಗಿಲ್ಲ. ಕಷ್ಟಪಟ್ಟು ಮಾಡಿದ ಕೆಲಸಕ್ಕೆ ಸೂಕ್ತ ಪ್ರತಿಫಲ ಸಿಗುತ್ತಿಲ್ಲ. ದೇಶಾದ್ಯಂತ ಅವರ ಸಿನಿಮಾವನ್ನು ಬಹಿಷ್ಕಾರ ಮಾಡುವ ಟ್ರೆಂಡ್ ಜಾರಿಯಲ್ಲಿದೆ. ಈ ಹಿಂದೆ ಅಸಹಿಷ್ಣತೆ ಬಗ್ಗೆ ಅವರು ನೀಡಿದ್ದ ಹೇಳಿಕೆಗೆ ಇನ್ನೂ ವಿರೋಧ ವ್ಯಕ್ತವಾಗುತ್ತಲೇ ಇದೆ. ಎಲ್ಲದರ ಪರಿಣಾಮವಾಗಿ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸೋತಿದೆ. ಆಗಸ್ಟ್ 11ರಂದು ಈ ಚಿತ್ರ ದೇಶಾದ್ಯಂತ ರಿಲೀಸ್ ಆಯಿತು. ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲು ಈ ಸಿನಿಮಾಗೆ ಸಾಧ್ಯವಾಗಿಲ್ಲ. ಇದು ಆಮಿರ್ ಖಾನ್ ಅಭಿಮಾನಿಗಳಿಗೆ ಬೇಸರ ತರಿಸಿದೆ. ಈ ಸೋಲಿನ ಬೆನ್ನಲ್ಲೇ ಆಮಿರ್ ಖಾನ್ ಬಗ್ಗೆ ಒಂದಷ್ಟು ಗಾಸಿಪ್ಗಳು ಕೇಳಿಬರುತ್ತಿವೆ. ‘ಲಾಲ್ ಸಿಂಗ್ ಚಡ್ಡಾ’ ಚಿತ್ರ ಹೀನಾಯವಾಗಿ ಸೋತಿದ್ದರಿಂದ ಅವರು ಖಿನ್ನತೆಗೆ ಒಳಗಾಗಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಆಮಿರ್ ಖಾನ್ ಅವರ ಆಪ್ತ ಮೂಲಗಳಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.
ಚಿತ್ರರಂಗದಲ್ಲಿ ಸೋಲು-ಗೆಲುವು ಸಹಜ. ಆಮಿರ್ ಖಾನ್ ಕೂಡ ಬಣ್ಣದ ಲೋಕದಲ್ಲಿ ಹಲವು ಬಾರಿ ಏಳು-ಬೀಳುಗಳನ್ನು ಕಂಡಿದ್ದಾರೆ. ಹಾಗಿದ್ದರೂ ಕೂಡ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಸೋಲು ಅವರನ್ನು ಚಿಂತೆಗೀಡು ಮಾಡಿದೆ. ಸಿನಿಮಾ ಚೆನ್ನಾಗಿಲ್ಲದೇ ಸೋತರೆ ಒಂದು ಅರ್ಥ ಇರುತ್ತದೆ. ಆದರೆ ಬಹಿಷ್ಕಾರದ ಕಾರಣದಿಂದ ಸಿನಿಮಾ ಸೋತಿರುವುದು ಅವರಿಗೆ ಸಖತ್ ಬೇಸರ ತರಿಸಿದೆ ಎಂದು ಹೇಳಲಾಗುತ್ತಿದೆ.
ಹಾಲಿವುಡ್ನಲ್ಲಿ ಸೂಪರ್ ಹಿಟ್ ಆಗಿದ್ದ ‘ಫಾರೆಸ್ಟ್ ಗಂಪ್’ ಚಿತ್ರದ ಹಿಂದಿ ರಿಮೇಕ್ ಆಗಿ ‘ಲಾಲ್ ಸಿಂಗ್ ಚಡ್ಡಾ’ ಮೂಡಿಬಂದಿದೆ. ಈ ಸಿನಿಮಾದಲ್ಲಿ ಆಮಿರ್ ಖಾನ್‌ಗೆ ಜೋಡಿಯಾಗಿ ಕರೀನಾ ಕಪೂರ್ ಖಾನ್ ಅಭಿನಯಿಸಿದ್ದಾರೆ. ಟಾಲಿವುಡ್ ಸ್ಟಾರ್ ನಟ ನಾಗ ಚೈತನ್ಯ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಯಾರಿಂದಲೂ ಈ ಚಿತ್ರವನ್ನು ಸೇವ್ ಮಾಡಲು ಸಾಧ್ಯವಾಗಿಲ್ಲ.
ಸಿನಿಮಾ ಸೋತ ಬಳಿಕ ಆಮಿರ್ ಖಾನ್ ಅವರಿಗೆ ಡಿಪ್ರೆಷನ್ ಶುರುವಾಗಿದೆ. ಅವರು ಒಂಟಿಯಾಗಿ ಇರುತ್ತಿದ್ದಾರೆ. ಮಾಧ್ಯಮದವರ ಫೋನ್ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದೆಲ್ಲ ಗಾಸಿಪ್ ಹಬ್ಬಿದೆ. ಸೋಲಿನ ಕುರಿತು ಅವರು ಇನ್ನಷ್ಟೇ ಮೌನ ಮುರಿಯಬೇಕಿದೆ. ಮೊದಲ ನಾಲ್ಕು ದಿನಕ್ಕೆ ಈ ಸಿನಿಮಾ ಗಳಿಸಿದ್ದು 37 ಕೋಟಿ ರೂಪಾಯಿ ಮಾತ್ರ. ಆಮಿರ್
ಖಾನ್ ಅವರಂತಹ ಸ್ಟಾರ್ ನಟರ ಚಿತ್ರಕ್ಕೆ ಈ ಮೊತ್ತ ತೀರಾ ಚಿಕ್ಕದು. ಬಾಕ್ಸ್ ಆಫೀಸ್ನಲ್ಲಿ ಸೋತಿದ್ದು ಮಾತ್ರವಲ್ಲದೇ ಒಂದಷ್ಟು ವಿವಾದಗಳನ್ನು ಕೂಡ ಈ ಸಿನಿಮಾ ಮಾಡಿಕೊಂಡಿದೆ.
ಆಮೀರ್ ಖಾನ್ ಈ ಸಿನಿಮಾ ಅನೌನ್ಸ್ ಮಾಡಿದಾಗಿನಿಂದ ಬಾಯ್ಕಟ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಆಮೀರ್ ಖಾನ್ ಈ ಹಿಂದೆ ನೀಡಿದ್ದ ಹೇಳಿಕೆ. ಮಾಜಿ ಪತ್ನಿ ಕಿರಣ್ ರಾವ್ ಜೊತೆ ಈ ದೇಶದಲ್ಲಿ ಅಸಹಿಷ್ಣುತೆ ಜಾಸ್ತಿಯಾಗಿದೆ ದೇಶ ಬಿಟ್ಟು ಹೋಗಲು ನಿರ್ಧರಿಸಿದ್ದೆ ಎಂದು ಹೇಳಿದ್ದರು. ಇದು ಆಮೀರ್ ಖಾನ್ ಗೆ ಭಾರಿ ಹಿನ್ನಡೆಯಾಗಿತ್ತು. ಆಮೀರ್ ಖಾನ್‌ಗೆ ದೇಶ ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟಲಾಯಿತು. ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಯ ವೇಳೆ ಬಾಯ್ಕಟ್ ಅಭಿಯಾನ ಜೋರಾಯ್ತು. ಆದರೆ ಆಮೀರ್ ಖಾನ್ ಬಹಿರಂಗವಾಗಿ ಕ್ಷಮೆ ಕೇಳಿದ್ದರು. ನಾನು ದೇಶ ವಿರೋಧಿ ಅಲ್ಲ, ಸಿನಿಮಾ ಬಾಯ್ಕಟ್ ಮಾಡಬೇಡಿ, ಎಲ್ಲರೂ ಸಿನಿಮಾ ನೋಡಿ' ಕೇಳಿಕೊಂಡಿದ್ದರು. ಆದರೂ ಬಾಯ್ಕಟ್ ಅಭಿಯಾನ ನಿಂತಿರಲಿಲ್ಲ, ಲಾಲ್ ಸಿಂಗ್ ಚಡ್ಡಾ ಸಿನಿಮಾ ಹೀನಾಯ ಸೋಲು ಅನುಭವಿಸಿದೆ.















