ಬಾಲಿವುಡ್ ನಟ ಆಮಿರ್ ಖಾನ್ (Aamir Khan)ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ದೀರ್ಘಕಾಲದ ಗೆಳತಿ ಗೌರಿ ಸ್ಪ್ರಾಟ್(Gauri Spratt) ಅವರನ್ನು ಜುಲೈ 5ರಂದು ವಿವಾಹವಾಗುತ್ತಿರುವುದಾಗಿ ಆಮಿರ್ ಖಾನ್ ಅಧಿಕೃತವಾಗಿ ದೃಢಪಡಿಸಿದ್ದಾರೆ.
ಹೇಗಿರುತ್ತೆ ಆಮಿರ್- ಗೌರಿ ಮದುವೆ?
ಮುಂಬೈನಲ್ಲಿರುವ ತಮ್ಮ ನಿವಾಸದಲ್ಲೇ ಈ ಮದುವೆ ಸರಳವಾಗಿ ನಡೆಯಲಿದ್ದು, ಕುಟುಂಬದ ಸದಸ್ಯರು, ಆಪ್ತ ಸ್ನೇಹಿತರು ಹಾಗೂ ಚಿತ್ರರಂಗದ ಕೆಲವೇ ಗಣ್ಯರು ಮಾತ್ರ ಭಾಗಿಯಾಗಲಿದ್ದಾರೆ. ಸುಮಾರು 100 ರಿಂದ 150 ಅತಿಥಿಗಳು ಮದುವೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಆಮಿರ್ ಖಾನ್, ಜುಲೈ 5ರಂದು ನನ್ನ ಮದುವೆ ನಡೆಯುತ್ತಿದೆ. ಇದು ನಮ್ಮಿಬ್ಬರಿಗೂ ತುಂಬಾ ವಿಶೇಷ ದಿನ. ಮನೆಯಲ್ಲೇ ಚಿಕ್ಕ ಸಮಾರಂಭ ಮಾಡುತ್ತಿದ್ದೇವೆ. ಎಲ್ಲರ ಆಶೀರ್ವಾದ ಬೇಕು ಎಂದು ಹೇಳಿದ್ದಾರೆ.
ಯಾರು ಈ ಗೌರಿ ಸ್ಪ್ರಾಟ್?
ಬಾಲಿವುಡ್ ನಟ ಆಮಿರ್ ಖಾನ್ ಮದುವೆಯಾಗಲಿರುವ ಗೌರಿ ಸ್ಪ್ರಾಟ್ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ಬೆಂಗಳೂರಿನ ಮೂಲದ ಗೌರಿ ಉದ್ಯಮಿಯಾಗಿದ್ದು, ಫ್ಯಾಷನ್ ಹಾಗೂ ಫೋಟೋಗ್ರಫಿ ಕ್ಷೇತ್ರದ ಹಿನ್ನೆಲೆ ಹೊಂದಿದ್ದಾರೆ. 47 ವರ್ಷದ ಗೌರಿ ಅವರಿಗೆ ಈಗಾಗಲೇ ಏಳು ವರ್ಷದ ಮಗುವಿದೆ. ಬಾಲಿವುಡ್‌ನಿಂದ ದೂರವೇ ಇದ್ದ ಅವರು, ಕಳೆದ ವರ್ಷ ಆಮಿರ್ ಖಾನ್ ತಮ್ಮ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಪರಿಚಯಿಸಿದ್ದರು.
ಪ್ರಸ್ತುತ ಗೌರಿ, ಆಮಿರ್ ಖಾನ್ ಅವರ ನಿರ್ಮಾಣ ಸಂಸ್ಥೆಯಲ್ಲೂ ಕೆಲಸ ಮಾಡುತ್ತಿದ್ದಾರೆ. ಚಿತ್ರರಂಗದಿಂದ ದೂರವಿದ್ದರೂ, ಈಗ ಆಮಿರ್ ಖಾನ್ ಜೊತೆಗಿನ ಸಂಬಂಧದಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ.
25 ವರ್ಷಗಳ ನಂತರ ಒಂದಾದ ಪ್ರೇಮಕಥೆ
ಆಮಿರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಅವರ ಪ್ರೇಮಕಥೆ ಸಿನಿಮಾಗಿಂತ ಕಡಿಮೆ ಏನಿಲ್ಲ. ಹಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಇಬ್ಬರೂ
ಭೇಟಿಯಾಗಿದ್ದರು. ಬಳಿಕ ಇಬ್ಬರ ಜೀವನ ಬೇರೆ ದಾರಿಯಲ್ಲಿ ಸಾಗಿತ್ತು.
ಸುಮಾರು 25 ವರ್ಷಗಳ ನಂತರ ಇಬ್ಬರೂ ಮತ್ತೆ ಸಂಪರ್ಕಕ್ಕೆ ಬಂದರು. ಸ್ನೇಹವಾಗಿ ಆರಂಭವಾದ ಮಾತುಕತೆ, ಕಾಲಕ್ರಮೇಣ ಪ್ರೀತಿಯಾಗಿ ಬದಲಾಯಿತು. ತಮ್ಮ ಸಂಬಂಧವನ್ನು ಇಬ್ಬರೂ ಬಹಳ ದಿನಗಳ ಕಾಲ ಖಾಸಗಿಯಾಗಿಯೇ ಉಳಿಸಿಕೊಂಡಿದ್ದರು. ಕಳೆದ ವರ್ಷ ಆಮಿರ್ ಖಾನ್ ಮೊದಲ ಬಾರಿಗೆ ಗೌರಿಯನ್ನು ಮಾಧ್ಯಮಗಳಿಗೆ ಪರಿಚಯಿಸಿದ್ದರು. ಬಳಿಕ ಹಲವು ಕಾರ್ಯಕ್ರಮಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಗೌರಿ ನನ್ನ ಜೀವನಕ್ಕೆ ನೆಮ್ಮದಿ ಮತ್ತು ಸಂತೋಷ ತಂದಿದ್ದಾರೆ” ಎಂದು ಆಮಿರ್ ಖಾನ್ ಹಲವು ಬಾರಿ ಹೇಳಿಕೊಂಡಿದ್ದಾರೆ.
ಆಮಿರ್ ಖಾನ್ ಮಾಜಿ ಪತ್ನಿಯರು ಯಾರು?
ಜುಲೈ 5ರಂದು ಮೂರನೇ ಮದುವೆಗೆ ಸಜ್ಜಾಗಿರುವ ಆಮಿರ್ ಖಾನ್ ಅವರ ವೈಯಕ್ತಿಕ ಜೀವನ ಹಲವು ವರ್ಷಗಳಿಂದ ಸುದ್ದಿಯಲ್ಲಿದೆ. ಈ ಹಿಂದೆ ಅವರು ಎರಡು ಬಾರಿ ಮದುವೆಯಾಗಿದ್ದು, ಎರಡೂ ಸಂಬಂಧಗಳು ವಿಚ್ಛೇದನದಲ್ಲಿ ಅಂತ್ಯಗೊಂಡಿವೆ. 1986ರಲ್ಲಿ ಆಮಿರ್ ಖಾನ್ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. 2002ರಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದರು.
ಬಳಿಕ 2005ರಲ್ಲಿ ನಿರ್ದೇಶಕಿ ಕಿರಣ್ ರಾವ್ ಅವರನ್ನು ಆಮಿರ್ ವಿವಾಹವಾಗಿದ್ದರು. ಈ ದಂಪತಿಗೆ ಸರೊಗಸಿ ಮೂಲಕ ಆಜಾದ್ ಎಂಬ ಮಗನಿದ್ದಾನೆ. 2021ರಲ್ಲಿ ಕಿರಣ್ ರಾವ್ ಮತ್ತು ಆಮಿರ್ ಖಾನ್ ಬೇರ್ಪಟ್ಟರೂ, ಇಂದಿಗೂ ಇಬ್ಬರೂ ಉತ್ತಮ ಸ್ನೇಹ ಉಳಿಸಿಕೊಂಡಿದ್ದಾರೆ. ಈಗ ಗೌರಿ ಸ್ಪ್ರಾಟ್ ಜೊತೆ ಹೊಸ ಜೀವನ ಆರಂಭಿಸಲು ಆಮಿರ್ ಖಾನ್ ಸಜ್ಜಾಗಿದ್ದು, ಇದು ಅವರ ಜೀವನದ ಮೂರನೇ ಮದುವೆಯಾಗಲಿದೆ.















