ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಭವ್ಯ (28) ಇವರಿಗೆ ಜೂನ್ 20ರಂದು ರಾತ್ರಿ ತನ್ನ 3ನೇ ಹೆರಿಗೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಮಂಗಳವಾರ ರಾತ್ರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಹೆರಿಗೆಯಾಗುತ್ತಲೇ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದರು. ಬಳಿಕ ಮಗುವನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮುಂಜಾನೆ ಮಗುವೂ ಮೃತಪಟ್ಟಿದೆ ಎನ್ನಲಾಗಿದೆ.
ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಲಿಖಿತ ದೂರು ಸಲ್ಲಿಸಿರುವ ಮೃತರ ಗಂಡ ಬಾಲಕೃಷ್ಣ ಗೌಡರು ಜೂನ್೨೦ರಂದು ಮಂಗಳವಾರ ಸಂಜೆ 6.30 ಕ್ಕೆ ಸುಮಾರಿಗೆ ತನ್ನ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡು ನೋವಿನಿಂದ ಒದ್ದಾಡುತ್ತಿದ್ದರೂ ಆಕೆಯ ದೈಹಿಕ ಆರೋಗ್ಯ ಸ್ಥಿತಿಯ ಬಗ್ಗೆಯಾಗಲಿ, ಸಹಜ ಹೆರಿಗೆಯ ಸಾಧ್ಯತೆ ಬಗ್ಗೆಯಾಗಲಿ ಯಾವುದೇ ಪರೀಕ್ಷೆಗಳನ್ನು ನಡೆಸದೆ ನೋವಿನಲ್ಲೇ
ನರಳುವಂತೆ ಮಾಡಿದ್ದಾರೆ. ಮಾತ್ರವಲ್ಲ ಆಕೆ ಅತೀವ ನೋವಿನಿಂದ ಒದ್ದಾಡುತ್ತಿದ್ದರೂ ವೈದ್ಯರನ್ನು ಕರೆಸುವ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಯಾವುದೇ ಪ್ರಯತ್ನವನ್ನು ಮಾಡದೆ ಗರ್ಭಿಣಿಯ ದೈಹಿಕ ಧಾರಣಾ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳದೆ ಒತ್ತಡ ತಂತ್ರವನ್ನು ಅನುಸರಿಸಿ ಅವಳ ಹೆರಿಗೆ ಮಾಡಲಾಗಿದೆ ಎಂದು ದೂರಿನಲ್ಲಿ ಅಪಾದಿಸಿದ್ದಾರೆ.
ದೂರು ಸ್ವೀಕರಿಸಿರುವ ಜಿಲ್ಲಾಧಿಕಾರಿಯವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ.















