ಕಬ್ಬಿಗೆ ನೀಡಲಾಗುತ್ತಿದ್ದ ಬೆಂಬಲ ಬೆಲೆಯನ್ನು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. ದೆಹಲಿಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸಕ್ಕರೆ ಕಾರ್ಖಾನೆಗಳಲ್ಲಿ ರೈತರಿಗೆ ನೀಡುವ ಕಬ್ಬಿನ ಕನಿಷ್ಠ ಬೆಂಬಲ ಬೆಲೆ ಏರಿಕೆಯನ್ನು ಮಾಡಲಾಯಿತು.
ಪ್ರತಿ ಕ್ವಿಂಟಾಲ್ ಕಬ್ಬಿಗೆ 10 ರೂ.ಹೆಚ್ಚಳ ಮಾಡುವ ಮೂಲಕ 2023-24 ಸಾಲಿನಲ್ಲಿ ಕ್ವಿಂಟಾಲ್ ಕಬ್ಬಿಗೆ 315 ರೂ ಬೆಲೆ ನಿಗದಿ ಮಾಡಿದೆ. ಕೇಂದ್ರ ಸಂಪುಟ ಸಭೆಯಲ್ಲಿ ನಡೆದ ಮಹತ್ವದ ನಿರ್ಧಾರ ಇದಾಗಿದೆ. ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಹೆಚ್ಚಳದಿಂದ ಕಬ್ಬು ಬೆಳೆಗಾರರು ಸಂತಸಗೊಂಡಿದ್ದಾರೆ. 2014-15 ಸಾಲಿನಲ್ಲಿ ಪ್ರತಿ ಕ್ವಿಂಟಾಲ್‌ಗೆ 210 ರೂ ಇದ್ದ ಕಬ್ಬಿನ ಎಫ್‌ಆರ್‌ಪಿ
ಕಳೆದ ವರ್ಷ 305 ರೂಪಾಯಿ ಇತ್ತು ಇದೀಗ 2023-24 ನೇ ಸಾಲಿನಲ್ಲಿ ಕ್ವಿಂಟಲ್‌ಗೆ 315 ರೂ ಏರಿಕೆಯಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಕಬ್ಬು ಬೆಂಬಲ ಬೆಲೆ 10ರೂ. ಹೆಚ್ಚಳದಿಂದ ದೇಶದಲ್ಲಿರುವ 5 ಕೋಟಿಗೂ ಅಧಿಕ ಕಬ್ಬು ಬೆಳೆಗಾರರು, ಕೂಲಿ ಕಾರ್ಮಿಕರು ಹಾಗೂ ಸಕ್ಕರೆ ಕಾರ್ಖಾನೆಗಳ 5 ಲಕ್ಷ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.















