ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆ.

Coastal Bulletin
ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆ.

ಬಂಟ್ವಾಳ: ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ 2026–27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ಮಹತ್ವ ಪ್ರತಿಬಿಂಬಿಸುವ ರೀತಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಚುನಾವಣೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮೊಹಮ್ಮದ್ ನಿಹಾದ್ ಅವರು ಅತ್ಯಧಿಕ ಮತಗಳನ್ನು ಪಡೆದು ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷರಾಗಿ ಆಯ್ಕೆಯಾದರೆ, ಅದೇ ವಿಭಾಗದ ವಿದ್ಯಾರ್ಥಿನಿ ಫಾತಿಮತುಲ್ ಅಲೀಮಾ ಸನಾಮಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾ ಪ್ರಕ್ರಿಯೆ ಶಾಂತಿಯುತ, ಪಾರದರ್ಶಕ ಹಾಗೂ ಮಾದರಿಯುತವಾಗಿ ನಡೆದಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದರು. ಫಲಿತಾಂಶವನ್ನು ಪ್ರಕಟಿಸಿದ ಪ್ರಾಂಶುಪಾಲ ವಿ ಸುಬ್ರಮಣ್ಯ ಭಟ್ ಬಳಿಕ ಮಾತನಾಡಿ, ನೂತನವಾಗಿ ಆಯ್ಕೆಯಾದ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿ, ವಿದ್ಯಾರ್ಥಿಗಳ ಹಿತಾಸಕ್ತಿಗೆ ಆದ್ಯತೆ ನೀಡಿ ಜವಾಬ್ದಾರಿಯುತ ನಾಯಕತ್ವವನ್ನು ಪ್ರದರ್ಶಿಸುವಂತೆ ಕರೆ ನೀಡಿದರು.

ವಿದ್ಯಾರ್ಥಿ ಸಂಸತ್ತು ಕಾಲೇಜಿನಲ್ಲಿ ನಾಯಕತ್ವ ಗುಣ, ಸೇವಾ ಮನೋಭಾವ, ಸಂಘಟನಾ ಕೌಶಲ್ಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಮಹತ್ವದ

ವೇದಿಕೆಯಾಗಿದ್ದು, ಆಯ್ಕೆಯಾದ ಪ್ರತಿನಿಧಿಗಳು ವಿದ್ಯಾರ್ಥಿಗಳ ಆಶೋತ್ತರಗಳಿಗೆ ಸ್ಪಂದಿಸಿ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಚುನಾವಣೆಯ ಸಮಗ್ರ ಪ್ರಕ್ರಿಯೆಗೆ ರಾಜ್ಯಶಾಸ್ತ್ರ ಉಪನ್ಯಾಸಕರಾದ ದಿನೇಶ್ ಶೆಟ್ಟಿ ಅಳಿಕೆ ಮಾರ್ಗದರ್ಶನ ನೀಡಿದರು. ಚುನಾವಣಾಧಿಕಾರಿಯಾಗಿ ಸಾಯಿರಾಂ ಜೆ. ನಾಯಕ್ ಕೆ., ಸಹ ಚುನಾವಣಾಧಿಕಾರಿಗಳಾಗಿ ಶರತ್ ಆಳ್ವ ಚನಿಲ ಹಾಗೂ ಚಂದ್ರಶೇಖರ್ ಶೆಟ್ಟಿ ಕರ್ತವ್ಯ ನಿರ್ವಹಿಸಿದರು.

ಮತಗಟ್ಟೆ ಅಧ್ಯಕ್ಷಾಧಿಕಾರಿಗಳಾಗಿ ಡಾ. ವಿಶ್ವನಾಥ ಪೂಜಾರಿ, ಅಬ್ದುಲ್ ರಹಿಮಾನ್ ಡಿ.ಬಿ., ಕವಿತಾ ಕೆ. ಬೇಬಿ, ನೀತಾಶ್ರೀ, ಪ್ರಫುಲ್ಲ ಶೆಟ್ಟಿ ಹಾಗೂ ಚಿತ್ರಾ ಅವರು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಚುನಾವಣಾ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಸಹಕಾರದಿಂದ ಚುನಾವಣೆ ಯಶಸ್ವಿಯಾಗಿ ಸಂಪನ್ನಗೊಂಡಿತು

Leave a Comment