Coastal Bulletin

ಬೆಂಗಳೂರು: ಪಠ್ಯ ಪರಿಷ್ಕರಣೆ ವಿವಾದದಲ್ಲಿ, ಇದೀಗ ಕನ್ನಡ ರಾಜ್ಯೋತ್ಸವದ ಕುರಿತು ಆರನೇ ತರಗತಿಯ ಕನ್ನಡ ಭಾಷಾ ಪಠ್ಯದಲ್ಲಿ ತಾಯಿ ಭುವನೇಶ್ವರಿಯ ‘ಮೆರವಣಿಗೆ’ ಕುರಿತ ಪಾಠವನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಕೈಬಿಟ್ಟಿರುವ ಆರೋಪ ಕೇಳಿ ಬಂದಿದೆ.

6ನೇ ತರಗತಿ ‘ಸಿರಿಗನ್ನಡ’ ಪ್ರಥಮ ಭಾಷಾ ಪಠ್ಯಪುಸ್ತಕದಲ್ಲಿ ಆರನೇ ಗದ್ಯವಾಗಿ ಮೆರವಣಿಗೆ ಪಾಠವಿತ್ತು. ಈ ಪಠ್ಯವನ್ನು ಹಿಂದಿನ ಸಮಿತಿಯೇ ರೂಪಿಸಿತ್ತು. ಕನ್ನಡ ರಾಜ್ಯೋತ್ಸವಕ್ಕಾಗಿ ಶಾಲೆಯೊಂದರಲ್ಲಿ ನಡೆದ ಸಿದ್ಧತೆ, ನವೆಂಬರ್‌ 1ರ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಹಾಗೂ ಭುವನೇಶ್ವರಿ ತಾಯಿಯ ಮೆರವಣಿಗೆಯನ್ನು ತಿಳಿಸುವ ಪಾಠ ಇದಾಗಿತ್ತು. ಆದರೆ, ಈ ಪಾಠವನ್ನು ಕೈಬಿಟ್ಟು ಬದಲಾಗಿ ಹುಬ್ಬಳ್ಳಿಯ ಸಿದ್ಧಾರೂಢ ಮಠದಿಂದ ಪ್ರತಿ ವರ್ಷ ನಡೆಯುವ ‘ಸಿದ್ಧಾರೂಢ ಜಾತ್ರೆ’ ಪಾಠವನ್ನು ಸೇರಿಸಲಾಗಿದೆ ಎನ್ನಲಾಗುತ್ತಿದೆ.

ರುಸ್ತುಂ ಎಂಬ ಹುಡುಗ ಸಿದ್ಧಾರೂಢರ ಕುರಿತು ಹೇಳುತ್ತಾನೆ.

ನಂತರ ಹಸೀನಾ ಎಂಬ ಹುಡುಗಿ ಕೂಡ ಮಠದ ಬಗ್ಗೆ ಮಾಹಿತಿ ಕೇಳುತ್ತಾಳೆ. ಗುರುಗಳು ವಿವರಿಸುತ್ತಾ ಹೋಗುವ ಪಾಠ ಇದಾಗಿದೆ.

ಸಿದ್ಧಾರೂಢರ ಜಾತ್ರೆಯನ್ನು ಪಠ್ಯದಲ್ಲಿ ಸೇರಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಯಾವುದೇ ಆಕ್ಷೇಪವಿಲ್ಲ. ಆದರೆ, ರಾಜ್ಯೋತ್ಸವ ಪಾಠವನ್ನು ತೆಗೆಯುವ ಬದಲು ಅದನ್ನು ಹಾಗೇ ಉಳಿಸಿಕೊಂಡು ಜಾತ್ರೆಯ ಪಾಠವನ್ನು ಬೇರೆಡೆ ಸೇರಿಸಬಹುದಿತ್ತು ಎಂಬ ಅಭಿಪ್ರಾಯ ಒಂದು ಕಡೆಯಾದರೆ, ಹೊಸದಾಗಿ ಸೇರಿಸಿರುವ ಸಿದ್ಧಾರೂಢ ಜಾತ್ರೆಯ ಪಾಠದಲ್ಲಿ ತೇರಿನ ಮುಂದೆ ಕೇಸರಿ ಬಾವುಟ ಹಾರಾಡುತ್ತಿರುವ ಚಿತ್ರವನ್ನು ಹಾಕಿರುವುದು  ಇನ್ನೊಂದು ಕಡೆ ಚರ್ಚೆಗೆ ಬಂದಿದೆ.

Leave a Comment