ಶಿವಮೊಗ್ಗ : ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಪೋಲಿಸ್ ಇಲಾಖೆಯಿಂದ ಗಡಿಪಾರು ಆದೇಶ ಪಡೆದಿದ್ದ ಶಿವಮೊಗ್ಗ ಸುಹೇಲ್ ಕೋಬ್ರಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಸುಹೇಲ್ ವಿರುದ್ಧ ತೀರ್ಥಹಳ್ಳಿ ಹಾಗು ಮಾಳೂರು ಠಾಣೆಯಲ್ಲಿ ಹಲವು ಕ್ರಿಮಿನಲ್ ಪ್ರಕರಣ ದಾಖಲಾಗಿದ್ದವು. ಈತನ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಇಲಾಖೆ ಎರಡು ವರ್ಷಗಳ ಅವಧಿಗೆ ಜಿಲ್ಲೆಯಿಂದ ಗಡಿಪಾರು ಮಾಡಿತ್ತು. ನವೆಂಬರ್ 28 ರಂದು ಗಡಿಪಾರು ಆದೇಶವನ್ನು ಜಾರಿ ಮಾಡಿ ಆತನ ಮನೆಗೆ ನೋಟಿಸ್ ಕಳುಹಿಸಲಾಗಿತ್ತು.
ಈ ಆದೇಶಕ್ಕೆ ಹೆದರಿದ್ದ
ಈತ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ತಕ್ಷಣ ಮನೆಯವರು ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಬಳಿಕ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಸುಹೇಲ್ ಗೆ ಚಿಕಿತ್ಸೆ ನೀಡಲಾಗಿತ್ತು. ನಂತರ ಮಂಗಳೂರಿನ ಯೆನಪೋಯಾ ಆಸ್ಪತ್ರೆಗೆ ಒಯ್ಯಲಾಯಿತು.
ಕೆಲವು ದಿನ ಒದ್ದಾಡಿದ ಈತ ನಿನ್ನೆ ರಾತ್ರಿ 1 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೆ ಪ್ರಾಣ ಕಳೆದುಕೊಂಡಿದ್ದಾನೆ.















