ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಡಾ.ಶಿವಕುಮಾರ್ ಶ್ರೀ ಗಳ 115 ನೇ ಜಯಂತಿ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸಲಿದ್ದಾರೆ. ಶುಕ್ರವಾರ (ಏ.01) ಬೆಳಿಗ್ಗೆ 10.45 ಕ್ಕೆ ತುಮಕೂರಿನ ವಿವಿ ಹೆಲಿಪ್ಯಾಡ್ಗೆ ಅಮಿತ್ ಷಾ ಆಗಮಿಸಲಿದ್ದು, ಬಳಿಕ ರಸ್ತೆ ಮೂಲಕ ಸಿದ್ದಗಂಗಾ ಮಠಕ್ಕೆ ತೆರಳಲಿದ್ದಾರೆ. ಮೊದಲಿಗೆ ಶಿವಕುಮಾರ್ ಶ್ರೀ ಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಲಿರುವ ಅಮಿತ್ ಷಾ, ಪೂಜೆ ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ
11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದ್ದು, 2 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಶ್ರೀಮಠಕ್ಕೆ ಬರುವ ನಿರೀಕ್ಷೆಯಿದೆ. ಕಾರ್ಯಕ್ರಮ ದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ್ ಖುಬಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಮಾಧುಸ್ವಾಮಿ,
ಆರಗ ಜ್ಞಾನೇಂದ್ರ, ವಿ ಸೋಮಣ್ಣ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದ್ದು, ಸುತ್ತೂರು ದೇಶಿಕೆಂದ್ರ ಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಿದ್ದಲಿಂಗ ಶ್ರೀ ಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಮಠಾಧಿಶರು ಭಾಗಿಯಾಗಲಿದ್ದಾರೆ.














