ಬಂಟ್ವಾಳ :ನರ ಸೇವೆಯೇ ನಾರಾಯಣ ಸೇವೆ ಎಂಬಂತೆ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಕೃಷ್ಣ ಕುಮಾರ್ ಪೂಂಜರ ಪ್ರಯತ್ನದಿಂದ ಕಳೆದ 4ವರುಷಗಳಿಂದ ಸರಕಾರದ ಮಹತ್ವಕಾಂಕ್ಷೆಯ ಯೋಜನೆಯನ್ನು ಸಮಾಜದ ಅರ್ಹರಿಗೆ ತಲುಪಿಸುತ್ತಿರುವ ಸೇವಾಂಜಲಿಯ ಮಾದರಿ ಕಾರ್ಯ ನಮಗೆಲ್ಲ ಪ್ರೇರಣೆಯಾಗಿದೆ ಎಂದು ಉಜಿರೆ ಎಸ್. ಡಿ. ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎ ಜಯಕುಮಾರ ಶೆಟ್ಟಿ ಹೇಳಿದರು.
ಅವರು ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಅಶ್ರಯದಲ್ಲಿ 05ನೇ ಬುಧವಾರ ಸೇವಾಂಜಲಿ ಸಭಾಗೃಹದಲ್ಲಿ 47ನೇ ತಿಂಗಳ ಕ್ಷಯ ರೋಗಿಗಳಿಗೆ ಆಹಾರ-ಧವಸಧಾನ್ಯ ವಿತರರಿಸಿ ಮಾತನಾಡಿ, ಭಾರತದಲ್ಲಿ ಅತೀ ಹೆಚ್ಚು ಕ್ಷಯ ರೋಗಿಗಳಿದ್ದು, ಆತ್ಮವಿಶ್ವಾಸದಿಂದ ಸರಿಯಾಗಿ ಔಷದಿ ಹಾಗೂ ಪೌಷ್ಟಿಕ ಆಹಾರ ಸೇವಿಸಿದರೆ ರೋಗಮುಕ್ತರಾಗಬಹುದು, ಕ್ಷಯ ರೋಗಿಗಳೊಂದಿಗೆ ಪ್ರೀತಿಯಿಂದ ಬೇರೆಯೋಣ, ರೋಗಿಗಳು ಕ್ಷಯ ಮುಕ್ತರಾಗುವುದು ಕೂಡ ದೇಶ ಸೇವೆಯ ಕಾರ್ಯ ಎಂದು ಹೇಳಿದರು.
ಎನಪೋಯ ಯೂನಿವರ್ಸಿಟಿಯ ಅಸಿಸ್ಟೆಂಟ್ ಪ್ರೊಫೆಸರ್ ಡಾ ಮಾಲವಿಕ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರು
ವೇದಿಕೆಯಲ್ಲಿ ಟಿ. ಗಣೇಶ ರಾವ್ ದಸ್ತಾವೇಜು ಬರಹಗಾರರು, ಬಿ.ಸಿ.ರೋಡು,ಇಂದಿರಾ ದರ್ಶಿನಿ ಸಹಕಾರಿ ಸಂಘ ಮಂಚಿ ಇದರ ಅಧ್ಯಕ್ಷ ಬಿ ಉಮರ್
ಉಪಸ್ಥಿತರಿದ್ದರು.
ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿ, ಕಳೆದ 47ತಿಂಗಳುಗಳಿಂದ ಸುಮಾರು 258ಕ್ಷಯ ರೋಗಿಗಳಿಗೆ ರೂ1100 ಮೌಲ್ಯದ ಪೌಷ್ಟಿಕ ಆಹಾರದ ಕಿಟ್ ವಿತರಣೆಯಾಗಿದೆ,ಒಬ್ಬರಿಗೆ 6ತಿಂಗಳುಗಳ ಕಾಲ ಕೊಡುತ್ತಿದ್ದು ಇದಕ್ಕಾಗಿ ಸುಮಾರು 16ಲಕ್ಷ ರೂ ದಾನಿಗಳ ಹಾಗೂ ಸಮಾಜದ ಜನರ ಸಹಕಾರದಿಂದ ವಿನಿಯೋಗಿಸಲಾಗಿದೆ ಅಲ್ಲದೆ ಸೇವಾಂಜಲಿ ಪ್ರತಿಷ್ಠಾನದ ಮೂಲಕ ಪ್ರತಿ ವರುಷ ಸುಮಾರು 45ಲಕ್ಷ ರೂ ಮೊತ್ತವನ್ನು ಸೇವಾ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪ್ತಕಾಶ ಕಿದೆಬೆಟ್ಟು, ಪ್ರಶಾಂತ್ ತುಂಬೆ, ಗಾಯತ್ರಿ ಚಿದಾನಂದ, ಉಮಾ ಚಂದ್ರಶೇಖರ, ಶೇಖರ ಕಲ್ಲತಡಮೆ, ಪದ್ಮನಾಭ ಕಿದೆಬೆಟ್ಟು, ಹರೀಶ್ ಕಡೆಗೋಳಿ, ತನುಷ್ ಶೆಟ್ಟಿ ಮೆರಮಜಲು, ಮದುರಾಜ್ ಮತ್ತಿತರರು ಉಪಸ್ಥಿತರಿದ್ದರು.
















