ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ಸಾಮೂಹಿಕ ಸೀಮಂತ ಕಾರ್ಯಕ್ರಮ ಆಯೋಜಿಸಲು ಸರ್ಕಾರದಿಂದ ಆದೇಶ ಹೊರಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಗರದ ಸಿಪಿಎಡ್ ಮೈದಾನದಲ್ಲಿ ಸೋಮವಾರ ನಡೆದ ಮೂರು ಸಾವಿರ ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗರ್ಭಿಣಿಯರಿಗೆ ಸೀಮಂತ ಮಾಡುವುದೆಂದರೆ ಅದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಭಾರತೀಯ ಸಂಸ್ಕೃತಿ ಮಹಿಳೆಗೆ ಅತ್ಯಂತ ಉನ್ನತ ಸ್ಥಾನವನ್ನು ಕೊಟ್ಟಿದೆ. ಮಾತೃತ್ವ ಎನ್ನುವುದು ಅತ್ಯಂತ ಶ್ರೇಷ್ಠವಾದ ಮೌಲ್ಯ. ಹಿಂದಿನಿಂದಲೂ ಮಾತೃದೇವೋಭವ ಎನ್ನುತ್ತೇವೆ, ಜನನಿ ತಾನೆ ಮೊದಲ ಗುರುವು ಎನ್ನುತ್ತೇವೆ. ಅದು ಸೀಮಂತದಿಂದ ಆರಂಭವಾಗಿ ಮಗು ಬೆಳವಣಿಗೆ ಹೊಂದಿದಂತೆ ಮುಂದುವರಿಯುತ್ತಾ ಹೋಗುತ್ತದೆ. ಒಂದು ಮಗುವಿನ ಬೆಳವಣಿಗೆ ಎಂದರೆ ಅದು ಸಮಾಜದ ಬೆಳವಣಿಗೆ, ದೇಶದ ಬೆಳವಣಿಗೆ, ಮಗುವನ್ನು ಸಮಾಜದ ಆಸ್ತಿಯಾಗಿ ಬೆಳೆಸಲು ಈ ಸಂಸ್ಕಾರಗಳು ಅತ್ಯಂತ ಅಗತ್ಯ. ಮಗು ನಾಳೆಯ ಉತ್ತಮ ಪ್ರಜೆಯಾಗಬೇಕು, ಸಮಾಜಕ್ಕೆ ಆಸ್ತಿಯಾಗಬೇಕು ಎಂದರು.
ಗರ್ಭಿಣಿಯಾಗಿದ್ದಾಗ ದೃಶ್ಯ, ಶ್ರವ್ಯ ಉತ್ತಮವಾಗಿರಬೇಕು: ತಾಯ್ತನದ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ, ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ನಿಭಾಯಿಸಿ, ಮಗುವಿಗೆ ಉತ್ತಮ ಸಂಸ್ಕಾರ ಕೊಟ್ಟು, ಬೆಳೆಸಿ ಎನ್ನುವುದನ್ನು ಹೇಳುವುದಕ್ಕಾಗಿ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮಹಾಭಾರತದಲ್ಲಿ ಸುಭದ್ರೆ ಗರ್ಭವತಿಯಾದಾಗ ಶ್ರೀಕೃಷ್ಣ ನೋಡಲು ಬರುತ್ತಾನೆ. ತಂಗಿಗೆ ಚಕ್ರವ್ಯೂಹದೊಳಗೆ ನುಗ್ಗುವುದು ಹೇಗೆ ಎನ್ನುವ ಕಥೆ ಹೇಳಲು ಆರಂಭಿಸುತ್ತಾನೆ. ಆದರೆ ಕಥೆ ಕೇಳುತ್ತಾ ಸುಭದ್ರಾ ನಿದ್ರೆಗೆ ಜಾರುತ್ತಾಳೆ. ಆಗ ಗರ್ಭದೊಳಗಿದ್ದ ಮಗು ಕಥೆ ಕೇಳುತ್ತ ಪ್ರತಿಕ್ರಿಯಸಲು ಆರಂಭಿಸುತ್ತದೆ. ಆಗ ಶ್ರೀಕೃಷ್ಣನಿಗೆ ಗೊತ್ತಾಗುತ್ತದೆ, ತನ್ನ ತಂಗಿಯ ಗರ್ಭದಲ್ಲಿರುವುದು ಸಾಮಾನ್ಯ ಮಗುವಲ್ಲ ಎಂದು. ಆಗಲೇ ಗರ್ಭದಲ್ಲಿರುವಾಗಲೇ ಅಭಿಮನ್ಯು ಶ್ರೀ ಕೃಷ್ಣ ಹೇಳಿದ ಕಥೆ ಕೇಳುತ್ತಾ
ಚಕ್ರವ್ಯೂಹ ಭೇದಿಸುವಂತಹ ದೊಡ್ಡ ಯುದ್ಧ ವಿದ್ಯೆಯನ್ನು ಕಲಿತಿದ್ದ. ಹಾಗಾಗಿ, ಗರ್ಭಿಣಿಯಾಗಿದ್ದಾಗ ದೃಶ್ಯ ಮತ್ತು ಶ್ರವ್ಯ ಎರಡೂ ಉತ್ತಮವಾಗಿರಬೇಕು ಎಂದು ಸಚಿವರು ಹೇಳಿದರು.
ಉಡಿ ತುಂಬಿ ಹರಸಿದ ಸಚಿವೆ: ವೇದಿಕೆ ಮೇಲೆ ಗರ್ಭಿಣಿಯರನ್ನು ಕೂರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೀರೆ, ಕಂಕಣ ಕೊಟ್ಟು, ಬಳೆ ತೊಡಿಸಿ, ತೆಂಗಿನಕಾಯಿ ಉಡುಗರೆಯಾಗಿ ಕೊಟ್ಟರು. ಬಳಿಕ ಪುಷ್ಪವೃಷ್ಟಿಗೈದು, ಆರತಿ ಬೆಳಗಿದರು. ಇದೇ ವೇಳೆ ಗರ್ಭಿಣಿಯರು ಹೆಬ್ಬಾಳ್ಕರ್ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಬಳಿಕ ಎಲ್ಲರಿಗೂ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಬೆಳಗಾವಿ ಗ್ರಾಮೀಣ ಕ್ಷೇತ್ರದ 100 ವಿಕಲಚೇತನರಿಗೆ ಬ್ಯಾಟರಿ ಚಾಲಿತ ವ್ಹೀಲ್ಚೇರ್, ಬ್ರೈಲ್ವಾಚ್ ಮತ್ತು ಲ್ಯಾಪ್‌ಟಾಪ್‌ಗಳನ್ನು ನೀಡಲಾಯಿತು. ಸಮಾರಂಭಕ್ಕೂ ಮುನ್ನ ಸ್ತ್ರೀಶಕ್ತಿ ಗುಂಪುಗಳನ್ನು ಉತ್ತೇಜಿಸಲು ವಿಭಾಗೀಯ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.
ಬೆಳಗಾವಿ, ಹಾವೇರಿ, ಬಾಗಲಕೋಟೆ, ವಿಜಯಪುರ, ಕಾರವಾರ, ಗದಗ ಹಾಗೂ ಧಾರವಾಡ ಹೀಗೆ 7 ಜಿಲ್ಲೆಗಳ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ಮತ್ತು ಜಿಲ್ಲಾ ಪಂಚಾಯಿತಿ ಎನ್ಆರ್ಎಲ್ಎಮ್ ಅಡಿ ಸ್ತ್ರೀ ಶಕ್ತಿ ಗುಂಪುಗಳು ಪಾಲ್ಗೊಂಡಿದ್ದವು. ಮಳಿಗೆಗಳಲ್ಲಿ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ, ಬಟ್ಟೆ ವ್ಯಾಪಾರ, ತಿಂಡಿ-ತಿನಿಸುಗಳ ವ್ಯಾಪಾರ, ಲಂಬಾಣಿ ಉಡುಪು, ಬಿದಿರಿನಿಂದ ತಯಾರಿಸಿದ ವಸ್ತುಗಳು, ವಿವಿಧ ರೀತಿಯ ಬ್ಯಾಗ್ಗಳು ಇತ್ಯಾದಿ ವಸ್ತುಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಮೂರು ದಿನಗಳ ಕಾಲ ವಸ್ತು ಪ್ರದರ್ಶನ ನಡೆಯಲಿದೆ.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸಚಿವರ ಸಹೋದರಿಯರು, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ, ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ಇಲಾಖೆಯ ಉಪ ನಿರ್ದೇಶಕರಾದ ನಾಗರಾಜ್.ಆರ್ ಸೇರಿ ಮತ್ತಿತರರು ಇದ್ದರು.














