ರೈತ ಸಂಘಟನೆಗಳ ಜೊತೆ ಸಿಎಂ ಸಭೆ: ರೈತರನ್ನ ವಿವಾಹವಾಗುವವರಿಗೆ 10 ಲಕ್ಷ ರೂ. ಠೇವಣಿ, ಸರ್ಕಾರಿ ಕೆಲಸದಲ್ಲಿ ಶೇ 20ರಷ್ಟು ಮೀಸಲಾತಿಗೆ ಮನವಿ

Coastal Bulletin
ರೈತ ಸಂಘಟನೆಗಳ ಜೊತೆ ಸಿಎಂ ಸಭೆ: ರೈತರನ್ನ ವಿವಾಹವಾಗುವವರಿಗೆ 10 ಲಕ್ಷ ರೂ. ಠೇವಣಿ, ಸರ್ಕಾರಿ ಕೆಲಸದಲ್ಲಿ ಶೇ 20ರಷ್ಟು ಮೀಸಲಾತಿಗೆ ಮನವಿ

ಬೆಂಗಳೂರು: ರೈತ ಯುವಕರನ್ನು ವಿವಾಹವಾಗುವ ಹೆಣ್ಣುಮಕ್ಕಳಿಗೆ ಕನಿಷ್ಠ 10 ಲಕ್ಷ ರೂ ಠೇವಣಿ, ಕೃಷಿ ಅಥವಾ ಕೃಷಿಪೂರಕ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಸರ್ಕಾರವೇ ಭದ್ರತೆ ನೀಡಿ ಬಡ್ಡಿರಹಿತ ಸಾಲ ಒದಗಿಸಿ ಉತ್ತೇಜನ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದೆ.

ವಿಧಾನಸೌಧದಲ್ಲಿ ನಡೆದ ರೈತ ಸಂಘಟನೆಗಳ ಜೊತೆಗಿನ‌ ಬಜೆಟ್ ಪೂರ್ವಭಾವಿ ಸಭೆಯಲ್ಲಿ ರೈತ ಸಂಘಟನೆಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಈ ಮನವಿ ಮಾಡಿದೆ. ರೈತ ಯುವಕರು ಮದುವೆ ಆಗಲು ವಧು ಸಿಗದೇ ಇರುವುದು ಒಂದು ಸಾಮಾಜಿಕ ಪಿಡುಗಾಗಿರುವುದು ವಿಷಾದನೀಯ. ಈ ಸಮಸ್ಯೆಗೆ ಕಾರಣಗಳನ್ನು ಕಂಡುಹಿಡಿಯಬೇಕು. ರೈತ ಯುವಕರನ್ನು ವಿವಾಹವಾಗುವ ಹೆಣ್ಣುಮಕ್ಕಳಿಗೆ ಕನಿಷ್ಠ 10 ಲಕ್ಷ ರೂ. ಠೇವಣಿ, ಕೃಷಿ ಅಥವಾ ಕೃಷಿಪೂರಕ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಸರ್ಕಾರವೇ ಭದ್ರತೆ ನೀಡಿ ಬಡ್ಡಿರಹಿತ ಸಾಲ ಒದಗಿಸಿ ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರೈತರ ಮದುವೆಯಾಗುವ ಹೆಣ್ಣುಮಗಳಿಗೆ ಉದ್ಯೋಗದಲ್ಲಿ ಶೇ 20ರಷ್ಟು ಮೀಸಲಾತಿ: ರೈತರ ಮಗನನ್ನು ಮದುವೆಯಾಗುವ ಹೆಣ್ಣು ಮಗಳಿಗೆ

ಸರ್ಕಾರಿ ಕೆಲಸದಲ್ಲಿ ಶೇಕಡಾ 20ರಷ್ಟು ಮೀಸಲಾತಿ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮನವಿ ಪತ್ರ ಸಲ್ಲಿದೆ.

ಕೃಷಿಕರು ಯಾವಾಗಲು ಅನಿಶ್ಚಿತತೆ ಎದುರಿಸುತ್ತಾ ಅಭದ್ರತೆಗೆ ಒಳಗಾಗಿದ್ದಾರೆ. ಈ ಸಾಲಿನ ಆಯವ್ಯಯ ಕೃಷಿಕರನ್ನು ಮೇಲೆತ್ತುವ ದೃಷ್ಟಿಯಿಂದ ಕೃಷಿವಲಯಕ್ಕೆ ಪ್ರಥಮ ಆಧ್ಯತೆ ನೀಡಿ ದೂರದೃಷ್ಟಿಯ ಕಾರ್ಯಕ್ರಮಗಳನ್ನು ರೂಪಿಸಬೇಕು. ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ಮಾತು ಕೊಟ್ಟಂತೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಎಪಿಎಂಸಿ ಕಾಯ್ದೆಯನ್ನು ಮತ್ತಷ್ಟು ರೈತ ಸ್ನೇಹಿ ಆಗಿ ಗಟ್ಟಿಗೊಳಿಸಬೇಕು. ಬಿಜೆಪಿ ಸರ್ಕಾರ ತಂದಿರುವ ಜಾನುವಾರು ಹತ್ಯೆ ನಿಷೇದ ಮತ್ತು ಸಂರಕ್ಷಣಾ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಲಾಗಿದೆ.‌

Leave a Comment