ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಮುಸ್ಲಿಮರ ವಿವಾಹ ನೋಂದಣಿ ಪ್ರಮಾಣಪತ್ರ ನೀಡುವ ಅಧಿಕಾರ ನೀಡಿರುವಂತಹುದನ್ನು ಎಲ್ಲೂ ಕೇಳಿಲ್ಲ ಎಂದು ಹೇಳಿರುವ ಕರ್ನಾಟಕ ಹೈಕೋರ್ಟ್, 'ಸರಕಾರ ಯಾವ ಕಾನೂನಿನಡಿ ಅಧಿಕಾರ ಬಳಸಿ ಇಂತಹ ಆದೇಶ ಹೊರಡಿಸಿದೆ ಎಂಬ ಬಗ್ಗೆ ಉತ್ತರ ನೀಡಬೇಕು' ಎಂದು ಆದೇಶಿಸಿದೆ.
ಬೆಂಗಳೂರಿನ ಆಲಂ ಪಾಷಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾ. ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು.
ಸರಕಾರಿ ವಕೀಲರು ಹಾಜರಾಗಿ, ''ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅದಕ್ಕೆ ನ್ಯಾಯಾಲಯ ಒಪ್ಪಲಿಲ್ಲ. ಅಲ್ಲದೆ, ವಿಚಾರಣೆಯನ್ನು ನ. 21ಕ್ಕೆ ಮುಂದೂಡಿ, ಸರಕಾರ ಮುಂದಿನ ವಿಚಾರಣೆ ವೇಳೆಗೆ ಲಿಖಿತ ರೂಪದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬೇಕು,'' ಎಂದು ನಿರ್ದೇಶನ ನೀಡಿತು.
''ವಕ್ಫ್ ಕಾಯಿದೆಯಡಿ ಎಲ್ಲಿ ಮಂಡಳಿಗೆ ಮದುವೆ ನೋಂದಣಿ ಪ್ರಮಾಣಪತ್ರ ವಿತರಿಸುವಂತಹ ಅಧಿಕಾರ ನೀಡಬಹುದು,'' ಎಂಬುದನ್ನು ಸಾಬೀತುಪಡಿಸುವಂತೆ ಮೌಖಿಕವಾಗಿ ಹೇಳಿತು.
ಕಳೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು,
''ರಾಜ್ಯ ಸರಕಾರದ ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಇಲಾಖೆ 2023ರ ಸೆ. 30ರಂದು ಆದೇಶ ಹೊರಡಿಸಿದ್ದು, ಅದರಂತೆ ಮುಸ್ಲಿಂ ಸಮುದಾಯದವರ ವಿವಾಹ ನೋಂದಣಿ ಪ್ರಮಾಣಪತ್ರಗಳನ್ನು ವಿತರಿಸುವ ಅಧಿಕಾರವನ್ನು ವಕ್ಫ್ ಮಂಡಳಿಗೆ ನೀಡಲಾಗಿದೆ. ಇದು ವಕ್ಫ್ ಕಾಯಿದೆ- 1995ರ ನಿಯಮಗಳಿಗೆ ವಿರುದ್ಧವಾಗಿದೆ. ಹಾಗಾಗಿ, ಸರಕಾರದ ಆದೇಶ ರದ್ದುಗೊಳಿಸಿದಂತೆ ಮೊದಲಿದ್ದ ವ್ಯವಸ್ಥೆಯನ್ನೇ ಮುಂದುವರಿಸಲು ಸರಕಾರಕ್ಕೆ ನಿರ್ದೇಶನ ನೀಡಬೇಕು,'' ಎಂದು ಕೋರಿದರು.
ಆಗ ಸರಕಾರಿ ವಕೀಲರು, ''ಮದುವೆ ಪ್ರಮಾಣಪತ್ರಗಳನ್ನು ವಿತರಿಸುವ ಅಧಿಕಾರ ಮಾತ್ರ ವಕ್ಫ್ ಮಂಡಳಿಗೆ ನೀಡಲಾಗಿದೆ, ಬೇರೆ ಯಾವ ಅಧಿಕಾರವನ್ನೂ ನೀಡಿಲ್ಲ,'' ಎಂದು ಸಮಜಾಯಿಷಿ ನೀಡಲು ಮುಂದಾದರು.
ಅದಕ್ಕೆ ನ್ಯಾಯಾಲಯ, ''ಮದುವೆ ಪ್ರಮಾಣಪತ್ರ ವಿತರಿಸುವ ಕಾರ್ಯವನ್ನು ವಕ್ಫ್ ಬೋರ್ಡ್ ಮಾಡಬೇಕಿಲ್ಲ'' ಎಂದು ಮೌಖಿಕವಾಗಿ ಹೇಳಿತು.















