ನಿಷೇಧದ ನಡುವೆ ಟ್ಯಾಕ್ಸಿ ಸೇವೆ ನೀಡುತ್ತಿದ್ದ 103 ಬೈಕ್‌ಗಳ ವಶ

Coastal Bulletin
ನಿಷೇಧದ ನಡುವೆ ಟ್ಯಾಕ್ಸಿ ಸೇವೆ ನೀಡುತ್ತಿದ್ದ 103 ಬೈಕ್‌ಗಳ ವಶ

ಬೆಂಗಳೂರು : ಹೈಕೋರ್ಟ್‌ ಆದೇಶದ ನಂತರವೂ ಸೋಮವಾರ ಟ್ಯಾಕ್ಸಿ ಸೇವೆ ನೀಡುತ್ತಿದ್ದ ಬೈಕ್‌ ಸವಾರರ ವಿರುದ್ಧ ಕ್ರಮ ಕೈಗೊಂಡಿರುವ ಸಾರಿಗೆ ಇಲಾಖೆ, 103 ಬೈಕ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ.

ರಾಜ್ಯದ ಸಾರಿಗೆ ನಿಯಮಗಳ ಅಡಿಯಲ್ಲಿ ಬೈಕ್‌ ಟ್ಯಾಕ್ಸಿ, ವೈಟ್‌ ಬೋರ್ಡ್‌ ವಾಹನಗಳ ಮೂಲಕ ಟ್ಯಾಕ್ಸಿ ಸೇವೆ ನೀಡುವಂತಿಲ್ಲ. ಬೈಕ್‌ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಯಾವುದೇ ನಿಯಮ ರೂಪುಗೊಂಡಿಲ್ಲ. ಆದರೂ, ಒಲಾ, ಉಬರ್‌, ರ್‍ಯಾಪಿಡೋ ಸೇರಿದಂತೆ ಇನ್ನಿತರ ಸಂಸ್ಥೆಗಳು ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿದ್ದವು. ಅದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆದು, ಜೂನ್‌ 15ರ ನಂತರ ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಸೇವೆ ನೀಡುವಂತಿಲ್ಲ ಎಂದು ಹೈಕೋರ್ಟ್‌ ಆದೇಶಿಸಿತ್ತು.

ಆ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ನಗರದ ವಿವಿಧ ಭಾಗಗಳಲ್ಲಿ ತಪಾಸಣೆ ನಡೆಸಿದ ವೇಳೆ ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿದ್ದ 103 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಎಲ್ಲ 103 ಬೈಕ್‌ಗಳ

ವಿರುದ್ಧ ಪ್ರಕರಣ ದಾಖಲಿಸಿ ತಲಾ 5 ಸಾವಿರ ರು. ದಂಡ ವಿಧಿಸಿದ್ದಾರೆ.

ಬೈಕ್‌ ಪಾರ್ಸೆಲ್‌ ಸೇವೆ

ಒಲಾ, ಉಬರ್‌, ರ್‍ಯಾಪಿಡೋ ಸೇರಿದಂತೆ ಎಲ್ಲ ಅಗ್ರಿಗೇಟರ್‌ಗಳು ಬೈಕ್ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಈಗಾಗಲೇ ಘೋಷಿಸಿವೆ. ತಮ್ಮ ಆ್ಯಪ್‌ಗಳಲ್ಲೂ ಬೈಕ್‌ ಟ್ಯಾಕ್ಸಿ ಸೇವೆ ಆಯ್ಕೆಯನ್ನು ತೆಗೆದು ಹಾಕಲಾಗಿದೆ. ಆದರೆ, ಒಲಾ, ಉಬರ್‌, ರ್‍ಯಾಪಿಡೋ ಸಂಸ್ಥೆಗಳು ಬೈಕ್‌ ಪಾರ್ಸೆಲ್‌ ಸೇವೆ ಆರಂಭಿಸಿವೆ. ಗ್ರಾಹಕರಿಗೆ ಟ್ಯಾಕ್ಸಿ ಸೇವೆಯ ಬದಲು ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಿಸುವ ಸೇವೆ ನೀಡಲಾಗುತ್ತದೆ. ಆದರೆ, ಈ ಸೇವೆಯ ಮೂಲಕವೇ ಬೈಕ್‌ ಸವಾರರು ಟ್ಯಾಕ್ಸಿ ಸೇವೆ ನೀಡುತ್ತಿರುವುದು ಸೋಮವಾರ ಪತ್ತೆಯಾಗಿದೆ. ಪಾರ್ಸೆಲ್‌ ಸೇವೆ ಹೆಸರಿನಲ್ಲಿ ಟ್ಯಾಕ್ಸಿ ಸೇವೆ ನೀಡುವವರ ವಿರುದ್ಧ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

Leave a Comment