ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಬದಲಾಯಿಸುವ ಪ್ರಸ್ತಾವನೆ ಒಪ್ಪತಕ್ಕದ್ದಲ್ಲ. ಜಿಲ್ಲೆಯ ವಿಶಿಷ್ಟ ಸಂಸ್ಕೃತಿ, ಪರಂಪರೆ ಮತ್ತು ಬಹುತ್ವವನ್ನು ಉಳಿಸಿ ಬೆಳೆಸಬೇಕು ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಬಿ. ಅಮ್ಜದ್ ಹೇಳಿದರು.
ಬಿ.ಸಿ.ರೋಡ್‌ನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಎಐಟಿಯುಸಿಯ 17ನೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತುಳುವರ ಸಂಸ್ಕೃತಿ, ದೈವಾರಾಧನೆ, ಕೃಷಿ ಮತ್ತು ಕುಲಕಸುಬುಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಅಸ್ಮಿತೆ ಬೆಸೆದುಕೊಂಡಿದೆ. ಜಿಲ್ಲೆಯ ಹೆಸರನ್ನು ಬದಲಾಯಿಸುವ ಪ್ರಸ್ತಾವನೆ ಈ ನೆಲದ ಸಾಂಸ್ಕೃತಿಕ ವೈಶಿಷ್ಟ್ಯಕ್ಕೆ ಧಕ್ಕೆ ತರುವಂತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಮಿಕರ ಹಕ್ಕುಗಳ ರಕ್ಷಣೆ, ಉದ್ಯೋಗ ಭದ್ರತೆ ಹಾಗೂ ಸಾರ್ವಜನಿಕ ಸಂಪತ್ತಿನ ಸಂರಕ್ಷಣೆಗಾಗಿ ದುಡಿಯುವ ವರ್ಗ ಸಂಘಟಿತರಾಗಿ ಹೋರಾಡಬೇಕು. ಕಾರ್ಮಿಕ ಚಳವಳಿಯ ಸುದೀರ್ಘ ಪರಂಪರೆಯನ್ನು ಹೊಂದಿರುವ ಎಐಟಿಯುಸಿ ನೇತೃತ್ವದಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ
ಸಿಪಿಐ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್, ಎಐಟಿಯುಸಿ ಮಾಜಿ ಜಿಲ್ಲಾಧ್ಯಕ್ಷ ವಿ. ಕುಕ್ಯಾನ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಎಸ್. ಬೇರಿಂಜ ಮಾತನಾಡಿದರು. ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ವಿ. ರಾವ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಎ.ಪಿ. ರಾವ್, ಭಾರತಿ ಪ್ರಶಾಂತ್, ಬಿ. ಬಾಬು ಭಂಡಾರಿ, ಉಮಾವತಿ ಕುರ್ನಾಡು, ಮೀನಾಕ್ಷಿ ಶಾಂತಿಪಳಿಕೆ, ಶಶಿಕಲಾ ಗಿರೀಶ್, ಒ. ಕೃಷ್ಣ, ಶಿವಾನಂದ ಉಡುಪಿ ಮತ್ತಿತರರು ಉಪಸ್ಥಿತರಿದ್ದರು.
ಸಭೆಗೆ ಮುನ್ನ ಬಿ.ಸಿ.ರೋಡ್ ಅಂಚೆ ಕಚೇರಿ ಸಮೀಪದ ಸಿಪಿಐ ಕಚೇರಿಯಿಂದ ಲಯನ್ಸ್ ಸೇವಾ ಮಂದಿರದವರೆಗೆ ಮೆರವಣಿಗೆ ನಡೆಯಿತು. ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ ನಿರೂಪಿಸಿದರು. ಕರುಣಾಕರ ಮಾರಿಪಳ್ಳ ವಂದಿಸಿದರು.








