ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲುವಿನ ನವಚೇತನ ಕ್ರಿಕೆಟರ್ಸ್ (ಬಿಎನ್ಸಿ) ಆಶ್ರಯದಲ್ಲಿ ಬಿಎನ್ಸಿ ಸೇವಾ ಸುರಕ್ಷಾ ಯೋಜನೆಯಡಿ ಸಾರ್ವಜನಿಕರ ಸೇವೆಗಾಗಿ ರೂಪಿಸಲಾದ ಆಂಬುಲೆನ್ಸ್ನ್ನು ಅ. 25ರಂದು ಪಂಬದಬೆಟ್ಟು ಬಿಎನ್ಸಿ ಕ್ರೀಡಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿ. ಪಂ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ ಮಾತನಾಡಿ, ಕ್ರಿಕೆಟ್ ಮೂಲಕ ಸಂಘಟಿತರಾಗಿ ಸದ್ದುಗದ್ದಲವಿಲ್ಲದೆ ಆಂಬುಲೆನ್ಸ್ ಸೇವೆ ಒದಗಿಸಿರುವುದು ಶ್ಲಾಘನೀಯ. ಇದು ಊರಿನ ಆರೋಗ್ಯ ಸೇವೆಗೆ ಮಹತ್ವದ ಕೊಡುಗೆಯಾಗಿದ್ದು, ಇಂತಹ ಸಮಾಜಮುಖಿ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ. ಮುಂದೆಯೂ ಸಂಘಟನೆಯಿಂದ ಇನ್ನಷ್ಟು ಜನಪರ ಸೇವೆಗಳು ನಡೆಯಲಿ ಎಂದು ಹಾರೈಸಿದರು.
ಪ್ರಗತಿಪರ ಕೃಷಿಕ ನಾರಾಯಣ ಹೊಳ್ಳ ನೆತ್ತರಕೆರೆಗುತ್ತು ಮಾತನಾಡಿ, ದೈವ-ದೇವರನ್ನು ವ್ಯಾಪಾರೀಕರಣಗೊಳಿಸದೆ ಧರ್ಮದ ತತ್ವಗಳನ್ನು ಅರಿತು, ಸನಾತನ ಧರ್ಮದ ತಿರುಳನ್ನು ತಿಳಿದು ಸಮಾಜಮುಖಿ ಸೇವೆ ಮಾಡಬೇಕು. ಸಮಾಜದ ದೇಣಿಗೆ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು. ಮುಂದಿನ ದಿನಗಳಲ್ಲಿ ಸಂಘಟನೆಯ ಮೂಲಕ ಕ್ರೀಡಾ
ಅಕಾಡೆಮಿ ಆರಂಭಿಸುವ ಯೋಜನೆಯೂ ಸಾಕಾರಗೊಳ್ಳಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾದ ಹಿರಿಯರಾದ ಪದ್ಮನಾಭ ರಾವ್ ಕನಪಾಡಿ, ಜ್ಯೋತಿಷಿ ಅನಿಲ್ ಪಂಡಿತ್ ವಲವೂರ್, ಶ್ರೀರಾಮ ಕೃಪಾ ಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷ ಶಶಿಧರ್ ಬ್ರಹ್ಮರಕೂಟ್ಲು, ವಕೀಲ ಅರುಣ್ ರೋಶನ್ ಡಿ'ಸೋಜಾ, ಶ್ರೀಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಿವಾಕರ ಪಂಬದಬೆಟ್ಟು ಶುಭ ಹಾರೈಸಿದರು.
ಉದ್ಯಮಿ ಹನೀಫ್ ಕೋಸ್ಟಲ್ ಹಾಗೂ ಬಿಎನ್ಸಿ ಅಧ್ಯಕ್ಷ ಪುರುಷೋತ್ತಮ್ ಪಂಬದಬೆಟ್ಟು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಿಎನ್ಸಿ ತಂಡದ ಮಾರ್ಗದರ್ಶಕ ಧನಂಜಯ ಪಂಬದಬೆಟ್ಟು ಇವರನ್ನು ಗೌರವಿಸಿ ಅಭಿನಂಧಿಸಲಾಯಿತು.
ಮನೀಶ್ ಪಂಬದಬೆಟ್ಟು ಸ್ವಾಗತಿಸಿದರು. ಮಲ್ಲಿಕಾ ಜ್ಯೋತಿಗುಡ್ಡೆ ಪ್ರಾರ್ಥಿಸಿದರು. ಅಶ್ವಿನ್ ಪಂಬದಬೆಟ್ಟು ವಂದಿಸಿದರು. ಮನೋಜ್ ಕನಪಾಡಿ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.








