ಬಂಟ್ವಾಳ ಕುಲಾಲ ಸಂಘದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭ. ಮಕ್ಕಳ ಮೇಲಿನ ಒತ್ತಡ ಇಳಿಯಲಿ, ಮೊಬೈಲ್ ಬಳಕೆಗೆ ಕಡಿವಾಣ ಬೀಳಲಿ: ಡಾ. ಶ್ರೀನಿವಾಸ ವೇಲು

Coastal Bulletin
ಬಂಟ್ವಾಳ ಕುಲಾಲ ಸಂಘದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭ. ಮಕ್ಕಳ ಮೇಲಿನ ಒತ್ತಡ ಇಳಿಯಲಿ, ಮೊಬೈಲ್ ಬಳಕೆಗೆ ಕಡಿವಾಣ ಬೀಳಲಿ: ಡಾ. ಶ್ರೀನಿವಾಸ ವೇಲು

ಬಂಟ್ವಾಳ : ಮಕ್ಕಳ ಮೇಲೆ ಶಿಕ್ಷಣದ ಒತ್ತಡ ಹೆಚ್ಚಾಗದಂತೆ ಎಚ್ಚರ ವಹಿಸಬೇಕು. ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಮಕ್ಕಳಲ್ಲಿ ಸೃಜನಶೀಲತೆ, ಕೌಶಲ ಹಾಗೂ ಸ್ವಾವಲಂಬನೆಯ ಮನೋಭಾವ ಬೆಳೆಸಬೇಕು. ಇಂದಿನ ದಿನಗಳಲ್ಲಿ ಸ್ವ ಉದ್ಯೋಗ ಮತ್ತು ಉದ್ಯಮ ಆರಂಭಿಸಲು ವಿಫುಲ ಅವಕಾಶಗಳಿದ್ದು, ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಕುಂಬಾರರ ಅಭಿವೃದ್ಧಿ ನಿಗಮಕ್ಕೆ ಮುಂದಿನ ವರ್ಷ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರದ ಗಮನ ಸೆಳೆದು ಒತ್ತಡ ತರಲಾಗುವುದು ಎಂದು ರಾಜ್ಯ ಕುಂಬಾರರ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶ್ರೀನಿವಾಸ ವೇಲು ಹೇಳಿದರು.

ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಭಾನುವಾರ ನಡೆದ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಬೆನ್ನುತಟ್ಟುವುದು, ಪ್ರತಿಭಾವಂತರನ್ನು ಗೌರವಿಸುವುದು ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು ಸಮಾಜದ ಪ್ರಗತಿಯ ದೃಷ್ಟಿಯಿಂದ ಮಹತ್ವದ ಕಾರ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಸಾಧನೆಯ ಹಂಬಲ ಮೂಡಿಸುವುದರ ಜತೆಗೆ, ಆರ್ಥಿಕ ಸಂಕಷ್ಟದಿಂದ ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗದಂತೆ ನೆರವು ನೀಡುವ ಸಂಘದ ಪ್ರಯತ್ನ ಅಭಿನಂದನೀಯ ಎಂದರು.

ಕುಲಾಲ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಬಂಟ್ವಾಳ ತಾಲೂಕಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ನಿರಂತರ ವಿದ್ಯಾರ್ಥಿವೇತನ ವಿತರಿಸುವ ಮೂಲಕ ಅವರ ಮುಂದಿನ ಶೈಕ್ಷಣಿಕ ಪಯಣಕ್ಕೆ ಪ್ರೋತ್ಸಾಹ ನೀಡಲಾಯಿತು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ : ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ

ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದಾಮೋದರ ಮಾಸ್ಟರ್ ಏರ್ಯ, ಕರ್ನಾಟಕ ಐಡಲ್ ಪ್ರಶಸ್ತಿ ಪುರಸ್ಕೃತ ಸದಾನಂದ ಬಿ. ಬಂಗೇರ ಮೊಡಂಕಾಪು ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರರಾದ ಬೇಬಿ ಪ್ರಾದ್ಯಾ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ಬಿ. ನಾವೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಉಪನ್ಯಾಸಕಿ ಡಾ. ಆಶಾಲತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಮಚ್ಚೇಂದ್ರ ಸಾಲ್ಯಾನ್, ಕೋಶಾಧಿಕಾರಿ ಸೋಮನಾಥ ಸಾಲ್ಯಾನ್, ದಳಪತಿ ಚಂದ್ರಶೇಖರ ಶಿವಾಜಿನಗರ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ವಾರಿಜಾ ಚೇತನ್ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಸಂಪಾಜೆ ಸ್ವಾಗತಿಸಿದರು. ಮಹಿಳಾ ಘಟಕದ ಸದಸ್ಯರು ಪ್ರಾರ್ಥಿಸಿದರು. ಜಯಂತ ಬಂಗೇರ ವಗ್ಗ ವಂದಿಸಿದರು. ಕವಿತಾ ಯಾದವ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಸದಸ್ಯರು, ಸೇವಾದಳ ಹಾಗೂ ಮಹಿಳಾ ಘಟಕದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave a Comment