ವಗ್ಗ: ಮಹಿಳೆ ಅನುಮಾನಾಸ್ಪದ ಸಾವು; ಪತಿಯ ಬಂಧನ.

Coastal Bulletin
ವಗ್ಗ: ಮಹಿಳೆ ಅನುಮಾನಾಸ್ಪದ ಸಾವು; ಪತಿಯ ಬಂಧನ.

ಬಂಟ್ವಾಳ: ತಾಲೂಕಿನ ವಗ್ಗದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಮೃತೆಯ ಸಹೋದರ ದೂರು ನೀಡಿದ್ದಾರೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿ ಅರುಣ್ ಮಹಾದೇವ್ ದೇಸಂಗಿ (26) ಅವರ ಸಹೋದರಿ ಸುನೀತಾ ಮಹಾದೇವ್ ದೇಸಂಗಿ (34) ಅವರನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿ ಸಂಜೀವಕುಮಾರ್ (36) ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿ ಬಂಟ್ವಾಳ ತಾಲೂಕಿನ ವಗ್ಗದಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ದಂಪತಿಯ ನಡುವೆ ವೈವಾಹಿಕ ಕಲಹ ಉಂಟಾಗಿದ್ದು, ಸಂಬಂಧಿಕರು ಮಧ್ಯಸ್ಥಿಕೆ ವಹಿಸಿ ರಾಜಿ ಸಂಧಾನ ನಡೆಸಿದ್ದರು. ಹೆರಿಗೆಯ ಬಳಿಕ ತವರು ಮನೆಯಲ್ಲಿದ್ದ ಸುನೀತಾ ಅವರನ್ನು ಅ. 4ರಂದು ಸಂಜೀವಕುಮಾರ್ ತನ್ನ ಮನೆಗೆ ಕರೆತಂದಿದ್ದ ಎನ್ನಲಾಗಿದೆ.

ಅ. 22ರಂದು ಸುನೀತಾ ಅವರು ಸಹೋದರ ಅರುಣ್ ಅವರಿಗೆ ಕರೆ ಮಾಡಿ, ಪತಿ ಕಿರುಕುಳ ನೀಡುತ್ತಿದ್ದು, ಹಲ್ಲೆ ನಡೆಸುತ್ತಿರುವುದಾಗಿ ತಿಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮರುದಿನ ಮುಂಜಾನೆ ಸಂಜೀವಕುಮಾರ್ ಕರೆ ಮಾಡಿ, ಸುನೀತಾ ಅವರ ಆರೋಗ್ಯದಲ್ಲಿ

ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸುತ್ತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಅರುಣ್ ಅವರು ಸುನೀತಾ ಮೃತಪಟ್ಟಿರುವುದನ್ನು ಗಮನಿಸಿದ್ದು, ಮೃತದೇಹದ ಮೇಲೆ ಹಲ್ಲೆಯ ಗಾಯಗಳು ಹಾಗೂ ರಕ್ತದ ಗುರುತುಗಳು ಕಂಡುಬಂದಿದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅ. 22ರ ರಾತ್ರಿ ಮತ್ತು ಅ. 23ರ ಮುಂಜಾನೆಯ ನಡುವಿನ ಅವಧಿಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಂಜೀವಕುಮಾರ್ ಹಲ್ಲೆ ನಡೆಸಿ ಸಹೋದರಿಯನ್ನು ಕೊಲೆ ಮಾಡಿದ್ದಾನೆ ಎಂದು ಅರುಣ್ ದೂರು ನೀಡಿದ್ದಾರೆ.

ಈ ದೂರಿನ ಆಧಾರದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 142/2026ರಂತೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 103ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿ ಸಂಜೀವಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Leave a Comment