ಬಂಟ್ವಾಳ: ಕುತ್ತಿಗೆಗೆ ಆಕಸ್ಮಿಕವಾಗಿ ಹಗ್ಗ ಸಿಲುಕಿ ಉಸಿರುಗಟ್ಟಿ 9 ವರ್ಷದ ಬಾಲಕ ಮೃತಪಟ್ಟ ಘಟನೆ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಮಾವಿನಕಟ್ಟೆ ಸಮೀಪದ ಕೇಂತಲೆ ಮನೆಯಲ್ಲಿ ಅ. 25ರ ರಾತ್ರಿ ನಡೆದಿದೆ. ಕೇಂತಲೆ ಮನೆ ನಿವಾಸಿ ಆನಂದ ಪೂಜಾರಿ ಅವರ ಪುತ್ರ ಅಮೃತ್ ಎ. ಪೂಜಾರಿ (9) ಮೃತಪಟ್ಟ ಬಾಲಕ.
ಅ. 25ರ ರಾತ್ರಿ ಮನೆಯ ಎದುರಿನ ಹಾಲ್‌ನಲ್ಲಿ ಅಮೃತ್ ಒಬ್ಬನೇ ಆಟವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಕಿಟಕಿಗೆ ಮೊದಲೇ ಸಿಕ್ಕಿಸಲಾಗಿದ್ದ ಹಗ್ಗ ಆಕಸ್ಮಿಕವಾಗಿ ಆತನ ಕುತ್ತಿಗೆಗೆ ಸಿಲುಕಿಕೊಂಡಿದೆ ಎಂದು ತಿಳಿದುಬಂದಿದೆ.
ಬಾಲಕ ಮಾತನಾಡುತ್ತಿಲ್ಲ ಎಂಬುದನ್ನು ಗಮನಿಸಿದ ಆತನ ಸಹೋದರಿ ಪ್ರಾರ್ಥನಾ, ಜೋರಾಗಿ ಕೂಗುತ್ತಾ ಸಮೀಪದಲ್ಲಿದ್ದ ಚಿಕ್ಕಪ್ಪನ ಮನೆಗೆ ಓಡಿ ಹೋಗಿ ವಿಷಯ ತಿಳಿಸಿದ್ದಾಳೆ. ಬಳಿಕ ಕುಟುಂಬದವರು
ಮನೆಗೆ ಬಂದು ನೋಡಿದಾಗ, ಬಾಲಕನ ತಾಯಿ ಗೀತಾ ಅವರು ಅಮೃತ್‌ನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಅಳುತ್ತಿದ್ದರು ಎನ್ನಲಾಗಿದೆ.
ಕೂಡಲೇ ಬಾಲಕನಿಗೆ ಉಪಚರಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 27/2026ರಂತೆ ಬಿಎನ್‌ಎಸ್‌ಎಸ್ ಕಲಂ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ








