ಬಿ.ಸಿ.ರೋಡ್: ಭರತನಾಟ್ಯವು ಕೇವಲ ನೃತ್ಯಕಲೆಯಲ್ಲ; ಸಂಸ್ಕಾರ, ಶಿಸ್ತು ಹಾಗೂ ಗುರು-ಶಿಷ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಪ್ರಬಲ ಮಾಧ್ಯಮವಾಗಿದೆ. ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸುವುದರ ಜತೆಗೆ ದೈಹಿಕ ಆರೋಗ್ಯ ಮತ್ತು ಮಾನಸಿಕ ಸ್ಥೈರ್ಯವನ್ನು ವೃದ್ಧಿಸುವ ಶಕ್ತಿ ಈ ಕಲೆಯಲ್ಲಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
ಶುಕ್ರವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಕಲ್ಲಡ್ಕದ ಕಲಾನಿಕೇತನ ಸಂಸ್ಥೆಯ ‘ರಜತ ಕಲಾಯಾನ’ದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಇಂದಿನ ಯುವಜನತೆಯಲ್ಲಿ ಸಂಸ್ಕಾರ ಮೌಲ್ಯಗಳನ್ನು ಉಳಿಸಲು ಹಾಗೂ ಮಕ್ಕಳಲ್ಲಿ ಧಾರ್ಮಿಕತೆ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸಲು ಭರತನಾಟ್ಯ ಸಹಕಾರಿಯಾಗಿದೆ. ಸಂಸ್ಥೆಯ ಮೂಲಕ ಇನ್ನಷ್ಟು ಉತ್ತಮ ಕಲಾವಿದರು ರೂಪುಗೊಳ್ಳಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಭಾರತದಲ್ಲಿ ಜನಿಸಿರುವುದೇ ನಮ್ಮ ಸೌಭಾಗ್ಯ. ಇತರ ದೇಶಗಳಲ್ಲಿಯೂ ಹಾಡು ಮತ್ತು ನೃತ್ಯಗಳಿದ್ದರೂ, ಭಾರತೀಯ ಭರತನಾಟ್ಯವು ಹೃದಯಕ್ಕೆ ವಿಶಿಷ್ಟ ಅನುಭೂತಿ ನೀಡುವುದರ ಜತೆಗೆ ಮಾನಸಿಕ ಶಕ್ತಿಯನ್ನೂ ತುಂಬುತ್ತದೆ ಎಂದರು.
ಭರತನಾಟ್ಯದಲ್ಲಿ ಹಿನ್ನೆಲೆ ಗಾಯಕರ ಪಾತ್ರವೂ ಮಹತ್ವದ್ದಾಗಿದೆ. ಕಲಾನಿಕೇತನ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ತರಬೇತಿ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದ್ದು,
ಸಂಸ್ಥೆಯು ಇನ್ನಷ್ಟು ವಿದ್ಯಾರ್ಥಿಗಳಿಗೆ ಕಲೆಯ ಬೆಳಕು ನೀಡಲಿ ಹಾಗೂ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪುತ್ತೂರಿನ ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಅಂಡ್ ಕಲ್ಚರ್ (ರಿ.) ಸಂಸ್ಥೆಯ ನಿರ್ದೇಶಕಿ, ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ. ರೈ ಹಾಗೂ ಗೋವಾದ ಶಿರೋಡಾದ ಗೋಮಂತಕ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ. ನೀಲೇಶ್ ಪಿ. ಕೊರ್ಡೆ ಉಪಸ್ಥಿತರಿದ್ದರು.
ಕಲಾನಿಕೇತನದಲ್ಲಿ ತರಬೇತಿ ಪಡೆದು ವಿದ್ವತ್ ಪದವಿ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ನಿರ್ದೇಶಕಿ ಹಾಗೂ ಗುರು ವಿದುಷಿ ವಿದ್ಯಾ ಮನೋಜ್ ಸ್ವಾಗತಿಸಿದರು. ವಿದುಷಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಣ್ ಅಗ್ರಬೈಲು ವಂದಿಸಿದರು.
ಸಂಸ್ಥೆಯ ವಿದ್ಯಾರ್ಥಿಗಳಿಂದ ಪುಷ್ಪಾಂಜಲಿ, ರಾಮ ರಾಮಾಯಣ, ಕೃಷ್ಣಲೀಲೆ, ಮಹಿಷಮರ್ಧಿನಿ, ಅಯಿಗಿರಿ ನಂದಿನಿ ಹಾಗೂ ತಿಲ್ಲಾಣ ನೃತ್ಯರೂಪಕಗಳು ಪ್ರದರ್ಶನಗೊಂಡವು.








