ಮಂಡ್ಯ: ಪ್ರಧಾನಿ ನರೇಂದ್ರ ಮೋದಿಯವರಿಂದು (ಏ.15) ಆದಿಚುಂಚನಗಿರಿಗೆ ಭೇಟಿ ನೀಡಲಿದ್ದು, 80 ಕೋಟಿ ರೂ.ಗೂ ಅಧಿಕ ವೆಚ್ಚದ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆ ಮಾಡಲಿದ್ದಾರೆ.
ದೆಹಲಿಯಿಂದ (Delhi) ಪ್ರಧಾನಿ ಮೋದಿಯವರು (PM Modi) 10:05ಕ್ಕೆ ಹೆಚ್‌ಎಎಲ್‌ಗೆ (HAL) ಆಗಮಿಸಲಿದ್ದು, ಬಳಿಕ ಅಲ್ಲಿಂದ 10:50ಕ್ಕೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯ (Adichunchanagiri) ತಪೋವನದ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ. ಈ ವೇಳೆ ಮೋದಿಗೆ ಶ್ರೀ ಮಠದವರು ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ.
ಮೊದಲು ಮೋದಿ ಗೋರಕ್ಷಕನಾಥ ತಪಸ್ಸು ಮಾಡಿ, ಜ್ವಾಲಾಪೀಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ಕಾಲಭೈರವೇಶ್ವರಸ್ವಾಮಿ ಸನ್ನಿಧಿಗೆ ತೆರಳಲಿದ್ದಾರೆ. ಅಲ್ಲಿ ದರ್ಶನ ಪಡೆದು ಮಂಗಳಾರತಿ ಮಾಡಲಿದ್ದಾರೆ. ಬಳಿಕ ಗುರು ಭೈರವೈಕ್ಯ ಮಂದಿರದ ಉದ್ಘಾಟನೆ ಮಾಡಲಿದ್ದಾರೆ. ಆನಂತರ ಮಂದಿರ ವೀಕ್ಷಿಸಿ ಬಾಲಗಂಗಾಧರನಾಥ ಶ್ರೀಗಳಿಗೆ ನಮನ ಸಲ್ಲಿಸಲಿದ್ದಾರೆ. ನಂತರ ಕ್ರೀಡಾಂಗಣದ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಈ ವೇಳೆ ವೇದಿಕೆಯಲ್ಲಿ ಸೌಂದರ್ಯ ಲಹರೀ ಮತ್ತು ಶಿವಮಹಿಮ್ನಹಃ ಸ್ತೋತ್ರಮ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಈ ವೇಳೆ ಶ್ರೀ ಮಠದಿಂದ ಮೋದಿಗೆ ಉಡುಗೊರೆ ನೀಡಿ, ಸನ್ಮಾನಿಸಿ ಗೌರವ ಸಲ್ಲಿಸಲಿದ್ದಾರೆ.
ಗೌರವ ಸನ್ಮಾನದ ಬಳಿಕ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಭಕ್ತರನ್ನು ಉದ್ದೇಶಿಸಿ ಪ್ರಧಾನಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್‌ನಲ್ಲಿ ಹೆಚ್‌ಎಎಲ್‌ಗೆ ಮರಳಿ, ಅಲ್ಲಿಂದ ಕೇರಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಮೋದಿ ಆಗಮನದ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್:
ಚುಂಚನಗಿರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಭದ್ರತೆಗೆ 6 ಜನ ಎಸ್ಪಿ, 8 ಎಎಸ್ಪಿ, 18 ಡಿವೈಎಸ್ಪಿ, 53 ಇಸ್ಪೆಕ್ಟರ್, 175 ಸಬ್ ಇನ್ಸಪೆಕ್ಟರ್, 1,00 ಪೊಲೀಸ್ ಕಾನ್‌ಸ್ಟೆಬಲ್, 8 ಕೆಎಸ್‌ಆರ್‌ಪಿ, 16 ಡಿಆರ್ ತುಕಡಿ ನಿಯೋಜಿಸಲಾಗಿದೆ. ಒಟ್ಟು ಎರಡೂವರೆ ಸಾವಿರಕ್ಕೂ ಹೆಚ್ಚು ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಕಾರ್ಯಕ್ರಮ ಆರಂಭವಾಗುವ ಒಂದೂವರೆ ತಾಸಿನ ಮುಂಚೆ ಸಾರ್ವಜನಿಕರಿಗೆ ಬರಲು ಸೂಚನೆ ನೀಡಲಾಗಿದೆ. ಇನ್ನೂ
ಚುಂಚನಗಿರಿ ಸುತ್ತಮುತ್ತ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರನ್ವಯ ಬೆಳ್ಳೂರು ಪಟ್ಟಣ ಪಂಚಾಯಿತಿಯ 8 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣಿಕೆಗೆ ನಿರ್ಬಂಧ ಹೇರಲಾಗಿದೆ ಎಂದು ಮಂಡ್ಯ ಡಿಸಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.
ಆದಿಚುಂಚನಗಿರಿ ಇತಿಹಾಸ:
ಆದಿಚುಂಚನಗಿರಿ ಮಠ 1800 ವರ್ಷಗಳ ಇತಿಹಾಸ ಹೊಂದಿದ್ದು, ತ್ರಿವಳಿ ದಾಸೋಹ ಮೂಲಕ ಪ್ರಸಿದ್ಧಿ ಪಡೆದಿದೆ. ಚುಂಚನಗಿರಿ ಮಠದ ಅಪಾರ ಕೀರ್ತಿಗೆ ಕಾರಣರಾಗಿರುವವರೇ ಬಾಲಗಂಗಾಧರನಾಥ ಶ್ರೀಗಳು. ಇಂದು ಅದೇ ಬಾಲಗಂಗಾಧರನಾಥ ಶ್ರೀಗಳ ಗದ್ದುಗೆ ಸ್ಥಳದಲ್ಲಿ ಗುರು ಭೈರವೈಕ್ಯ ಮಂದಿರ ಸುಮಾರು 80 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿದೆ.
3 ಆಲಯಗಳನ್ನು ಹೊಂದಿರುವ ಭೈರವೈಕ್ಯ ಭವ್ಯ ಮಂದಿರ ಕಾರಣದೇಹ, ಸೂಕ್ಷ್ಮದೇಹ ಹಾಗೂ ಸ್ತೂಲದೇಹದ ಪರಿಕಲ್ಪನೆಯಲ್ಲಿ ನಿರ್ಮಾಣವಾಗಿದೆ. ಅನ್ನ, ಪ್ರಾಣ, ಮನೋಮಯ, ವಿಜ್ಞಾನ ಮತ್ತು ಆನಂದಮಯದ ಐದು ಕೋಶಗಳನ್ನು ಈ ಮಂದಿರ ಹೊಂದಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಹೊಯ್ಸಳ, ಚಾಲುಕ್ಯ, ಚೋಳರು ಮತ್ತು ಗಂಗರ ಕಾಲದ ಶಿಲ್ಪಕಲೆಯ ಸಮಾಗಮದಲ್ಲಿ ಮೂಡಿಬಂದಿದೆ. ಇಲ್ಲಿ ಒಡಿಸ್ಸಾದ ಸೂರ್ಯ ದೇಗುಲದ ಕಲೆಯ ನಿರೂಪಣೆ ಮಾಡಲಾಗಿದ್ದು, ಗೋಪುರಗಳು, ಶಿಲ್ಪಕಲೆಯ ಅದ್ಭುತ ಕೆತ್ತನೆಗಳು, ಬ್ರಹ್ಮಾಂಡದ ಕೆತ್ತನೆಗಳಿಂದ ಮಂದಿರದ ಮೆರಗು ಹೆಚ್ಚಿಸಲಾಗಿದೆ.
ಮಂದಿರದ ನಿರ್ಮಾಣಕ್ಕೆ ಕ್ಲೈರಾ ಎಂಬ ಕಲ್ಲು ಹೆಚ್ಚು ಬಳಕೆ ಮಾಡಲಾಗಿದ್ದು, ಇಳಕಲ್ ಹಾಗೂ ಸಂತೆಕಲ್ ಎಂಬ ಮಾದರಿ ಕಲ್ಲುಗಳು ಕೆತ್ತನೆಗೆ ಬಳಸಿದ್ದಾರೆ. ಸತತ ಆರೇಳು ವರ್ಷಗಳ ಪರಿಶ್ರಮದಿಂದ ಭವ್ಯ ಮಂದಿರ ಮೂಡಿಬಂದಿದ್ದು, ಬೆಳಗಾವಿಸೌಧ, ಬೆಂಗಳೂರಿನ ವಿಕಾಸಸೌಧ ಸೇರಿದಂತೆ ಮೊದಲಾದ ಭವ್ಯ ಕಟ್ಟಡ ಕಟ್ಟ ನಿರ್ಮಿಸಿದ ಕೀರ್ತಿ ಹೊಂದಿರುವ ಶಂಕರ ಸ್ತಪತಿಯವರೇ ಈ ಮಂದಿರವನ್ನು ನಿರ್ಮಿಸಿದ್ದಾರೆ













