Coastal Bulletin

ಬೆಂಗಳೂರು :ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಮಾಧ್ಯಮಗಳು ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ವರದಿ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ಪಡೆದಿದ್ದಾರೆ.ಕೆಲ ಕಿಡಿಗೇಡಿಗಳು ನಕಲಿ ಸಿಡಿ ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಡುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿ ಡಿ.ವಿ.ಸದಾನಂದಗೌಡರು ಸಿಟಿ ಸಿವಿಲ್‌ ಕೋರ್ಟ್‌ನಲ್ಲಿಅರ್ಜಿ ಸಲ್ಲಿಸಿದ್ದರು. ಅರ್ಜಿ ಮನವಿ ಆಲಿಸಿದ ನ್ಯಾಯಪೀಠ ನಿರ್ಬಂಧ ಆದೇಶವನ್ನು ಹೊರಡಿಸಿದೆ.

ಕೇಂದ್ರ ಸಚಿವ ಸಂಪುಟ ಪುನರ್‌ರಚನೆ ಸಂದರ್ಭದಲ್ಲಿ ಕೆಲ ಪತ್ರಿಕೆ, ಚಾನೆಲ್‌ಗಳಲ್ಲಿ ತಮ್ಮ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡುವ ಸಾಧ್ಯತೆ ಇದೆ. ಅಂತಹ ವಿಡಿಯೊ ಪ್ರಸಾರ ಮಾಡಿದರೆ ಘನತೆಗೆ ಧಕ್ಕೆ ಆಗಲಿದೆ ಮತ್ತು ಚಾರಿತ್ರ್ಯಹರಣವಾಗಲಿದೆ ಎಂದು ಅರ್ಜಿಯಲ್ಲಿ ಸದಾನಂದ ಗೌಡರು ಹೇಳಿದ್ದಾರೆ.  ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮಾ, ಬ್ರಿಟನ್‌ ರಾಣಿ ಕ್ವೀನ್‌ ಎಲಿಜಬೆತ್‌ ಕುರಿತು ನಕಲಿ ವಿಡಿಯೊ ಮಾಡಲಾಗಿತ್ತು ಎಂದು ಈ ಕುರಿತು ಕೆಲ ಹಳೆಯ ದೃಷ್ಟಾಂತಗಳ ಉದಾಹರಣೆಯನ್ನೂ ಕೊಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸದಾನಂದ ಗೌಡ ಚುನಾವಣೆ, ಸಂಪುಟ ರಚನೆ ಸಂದರ್ಭದಲ್ಲಿ ವಿರೋಧಿಗಳು ಈ ಮುಂಚೆಯೂ ನನ್ನ ವಯಕ್ತಿಕ ತೇಜೋವಧೆಗೆ ಪ್ರಯತ್ನಸಿದ್ದರು.ಮಾಧ್ಯಮ ಸ್ವಾತಂತ್ರ್ಯವನ್ನು ನಾನು

ಸಂಪೂರ್ಣ ಗೌರವಿಸುತ್ತೇನೆ. ಆದರೆ ವಿರೋಧಿಗಳ ಸಂಚಿಗೆ ಬಲಿಯಾಗಿ ತಪ್ಪುಮಾಹಿತಿ ಪ್ರಸರಣದಲ್ಲಿ ತೊಡಗಬಾರದೆಂಬ ಉದ್ದೇಶದಿಂದ ‌ನಿರ್ಬಂಧ ಆದೇಶ ತರಬೇಕಾಗಿ ಬಂತು. ದಯವಿಟ್ಟು ಯಾರೂ ಅನ್ಯತಾ ಭಾವಿಸಬಾರದು ಎಂದಿದ್ದಾರೆ.

ರಮೇಶ್ ಜಾರಕಿಹೊಳಿ ಅವರ ಯುವತಿ ಜತೆಗಿನ ಅಶ್ಲೀಲ ವಿಡಿಯೋ ಬಿಡುಗಡೆಗೊಂಡ ಬೆನ್ನಲ್ಲೇ ಸಚಿವರಾದ ಡಾ ಸುಧಾಕರ್,ಶಿವರಾಮ ಹೆಬ್ಬಾರ್, ಬಿ.ಸಿ.ಪಾಟೀಲ್, ಭೈರತಿ ಬಸವರಾಜು, ಕೆ. ಸುಧಾಕರ್, ಎಸ್.ಟಿ.ಸೋಮಶೇಖರ್ ಹಾಗೂ ನಾರಾಯಣ ಗೌಡ ಅವರು ತಮ್ಮ ವಿರುದ್ಧ ಯಾವುದೇ ರೀತಿಯ ಪ್ರಮಾಣಿಕರಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಸಿಟಿ ಸಿವಿಲ್ ಕೋರ್ಟ್ ನಿಂದ ತಡೆಯಾಜ್ಞೆ ತಂದಿರೋದನ್ನು ಇಲ್ಲಿ ನೆನಪಿಸಬಹುದು. ಇದೀಗ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರಿಗೂ ಈ ಭೀತಿ ಎದುರಾಗಿದೆ.

Leave a Comment