ಅಯೋಧ್ಯೆಯಲ್ಲಿ ಮರುಅಭಿವೃದ್ಧಿ ಆಗಿರುವ ರೈಲು ನಿಲ್ದಾಣ ಮತ್ತು ಹೊಸ ವಿಮಾನ ನಿಲ್ದಾಣದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಡಿಸೆಂಬರ್ 30) ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ವಿಮಾನ ನಿಲ್ದಾಣದ ಬಳಿ ಅವರು ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ಮೋದಿ ಅವರು ಬೆಳಗ್ಗೆ 10:45ರ ವೇಳೆಗೆ ವಿಮಾನ ನಿಲ್ದಾಣ ತಲುಪುವ ನಿರೀಕ್ಷೆಯಿದೆ. ನಂತರ ಅವರು ರೈಲು ನಿಲ್ದಾಣ ಉದ್ಘಾಟಿಸಲಿದ್ದಾರೆ. ಮತ್ತೆ ಹೊಸದಾಗಿ ನಿರ್ಮಾಣ ಆಗಿರುವ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದು ದಯಾಳ್ ಅವರು ಮಾಹಿತಿ ನೀಡಿದರು. ಇನ್ನು ಎರಡು ಹೊಸ ಅಮೃತ್ ಭಾರತ್ ಮತ್ತು 6 ಹೊಸ ವಂದೇ ಭಾರತ್ ರೈಲುಗಳಿಗೆ ಇದೇ ವೇಳೆ ಚಾಲನೆ ನೀಡಲಿದ್ದಾರೆ. ರ‍್ಯಾಲಿಯಲ್ಲಿ 1.5 ಲಕ್ಷ ಜನ ಸೇರುವ ಸಾಧ್ಯತೆಯಿದೆ. ಒಂದು ಗಂಟೆಯ ಅವಧಿಯಲ್ಲಿ ರ‍್ಯಾಲಿ ಬಳಿಕ ಅವರು ಅಯೋಧ್ಯೆಯಿಂದ ತೆರಳಲಿದ್ದಾರೆ ಎಂದು ತಿಳಿಸಿರು.
ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಪ್ರಧಾನಿ ಸಾಗುವ ರಾಮ ಪಥ ಮತ್ತು ಇತರ ರಸ್ತೆಗಳಿಗೆ ತಾತ್ಕಾಲಿಕ ಬ್ಯಾರಿಕೇಡ್ ಹಾಕುವ ಕಾರ್ಯ ಗುರುವಾರದಿಂದ ನಡೆಯುತ್ತಿದೆ. ಅಯೋಧ್ಯೆಯಲ್ಲಿ 11,100 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ನಾಗರಿಕ ಸೌಲಭ್ಯಗಳ ನವೀಕರಣ
ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯಗಳ ಯೋಜನೆಗಳಿಗೆ ಹಾಗೂ ಉತ್ತರ ಪ್ರದೇಶದ ಇತರ ಭಾಗಗಳಿಗೆ 4,600 ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೂ ಸಹ ಚಾಲನೆ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಯೋಧ್ಯೆಯ ಹೊಸ ವಿಮಾನ ನಿಲ್ದಾಣಕ್ಕೆ ʼಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮʼ ಎಂದು ಹೆಸರಿಡಲಾಗಿದೆ.ಅತ್ಯಾಧುನಿಕ ವಿಮಾನ ನಿಲ್ದಾಣದ 1 ನೇ ಹಂತವನ್ನು 1,450 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು 6500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ವಾರ್ಷಿಕವಾಗಿ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸುಸಜ್ಜಿತವಾಗಿದೆ. ಟರ್ಮಿನಲ್ ಕಟ್ಟಡದ ಮುಂಭಾಗವು ಮುಂಬರುವ ಅಯೋಧ್ಯೆಯ ರಾಮಮಂದಿರದ ದೇವಾಲಯದ ವಾಸ್ತುಶಿಲ್ಪವನ್ನು ಚಿತ್ರಿಸುತ್ತದೆ. ಟರ್ಮಿನಲ್ ಕಟ್ಟಡದ ಒಳಭಾಗವನ್ನು ಸ್ಥಳೀಯ ಕಲೆ, ವರ್ಣಚಿತ್ರಗಳು ಮತ್ತು ಭಗವಾನ ರಾಮನ ಜೀವನವನ್ನು ಚಿತ್ರಿಸುವ ಭಿತ್ತಿಚಿತ್ರಗಳಿಂದ ಅಲಂಕರಿಸಲಾಗಿದೆ.














