ರಾಜಸ್ಥಾನ ಕಾಂಗ್ರೆಸ್ ನಿಂದ 7 ಗ್ಯಾರಂಟಿಗಳ ಘೋಷಣೆ - ಚುನಾವಣೆಗೆ ಕರ್ನಾಟಕ ಮಾದರಿಯಲ್ಲಿ ಭರವಸೆ.

Coastal Bulletin
ರಾಜಸ್ಥಾನ ಕಾಂಗ್ರೆಸ್ ನಿಂದ 7 ಗ್ಯಾರಂಟಿಗಳ ಘೋಷಣೆ - ಚುನಾವಣೆಗೆ ಕರ್ನಾಟಕ ಮಾದರಿಯಲ್ಲಿ ಭರವಸೆ.

ಜೈಪುರ (ಅಕ್ಟೋಬರ್ 28, 2023): ರಾಜಸ್ಥಾನ ಚುನಾವಣೆಗೆ ಇನ್ನು ಕೇವಲ ಒಂದು ತಿಂಗಳು ಬಾಕಿ ಉಳಿದಿರುವ ನಡುವೆಯೇ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಕಾಂಗ್ರೆಸ್‌ ಪಕ್ಷದ ವತಿಯಿಂದ 7 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಈ ಪೈಕಿ 2 ಗ್ಯಾರಂಟಿಗಳು 3 ದಿನದ ಹಿಂದೆ ಘೋಷಣೆ ಆಗಿದ್ದರೆ, ಇನ್ನು 5 ಗ್ಯಾರಂಟಿಗಳು ಹೊಸ ಘೋಷಣೆಗಳಾಗಿವೆ. ಶುಕ್ರವಾರ ಕಾಂಗ್ರೆಸ್‌ ಸಭೆಯಲ್ಲಿ ಮಾತನಾಡಿದ ಗೆಹ್ಲೋಟ್ ತಾವು ಮರು ಆಯ್ಕೆಯಾದರೆ ಎಲ್ಲ 7 ಗ್ಯಾರಂಟಿಗಳನ್ನು ಜಾರಿ ಮಾಡುವ ಭರವಸೆ ನೀಡಿದರು. ಈ ಪೈಕಿ ಮನೆಯ ಯಜಮಾನತಿಗೆ ಗೃಹಲಕ್ಷ್ಮಿ ಯೋಜನೆ ಅಡಿ ವರ್ಷಕ್ಕೆ 10 ಸಾವಿರ ರೂ. ಹಾಗೂ 500 ರೂ .ನಲ್ಲಿ ಸಬ್ಸಿಡಿ ಸಿಲಿಂಡರ್‌ ನೀಡಿಕೆಯನ್ನು 3 ದಿನದ ಹಿಂದೆಯೇ ಪ್ರಕಟಿಸಿದ್ದರು. ಈ ಎರಡೂ ಸೇರಿ ಒಟ್ಟು 7 ಗ್ಯಾರಂಟಿಗಳನ್ನು ಶುಕ್ರವಾರ ಅವರು ಪ್ರಕಟಿಸಿದರು.

ಹೊಸ ಘೋಷಣೆಗಳ ಪೈಕಿ, ಸರ್ಕಾರವು ರೈತರಿಂದ ಹಸು ಸಗಣಿಯನ್ನು ಕೆಜಿಗೆ 2 ರೂ. ನಂತೆ ಖರೀದಿಸಿ ರಸಗೊಬ್ಬರವಾಗಿ ಪರಿವರ್ತಿಸಲಿದೆ. ಪ್ರಸ್ತುತ ಭಾರತದಲ್ಲಿ ಕೇವಲ ಛತ್ತೀಸ್‌ಗಢದಲ್ಲಿ ಮಾತ್ರ ಈ ಯೋಜನೆ ಜಾರಿಯಲ್ಲಿದ್ದು ಅದನ್ನು ಗೋಧನ ನ್ಯಾಯ ಯೋಜನೆ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ.

7 ಗ್ಯಾರಂಟಿಗಳು 

1.ಕುಟುಂಬದ ಯಜಮಾನಿಗೆ ವಾರ್ಷಿಕ 10,000 ರೂ.

2.ಹಸು ಸಗಣಿ ಕೆಜಿಗೆ 2 ರೂ.ನಂತೆ ಸರ್ಕಾರದಿಂದ ಖರೀದಿ. ಈ ಸಗಣಿ ಮೂಲಕ ಸಾವಯವ ಗೊಬ್ಬರ ಹಾಗೂ ವಿವಿಧ ಉತ್ಪನ್ನಗಳ ತಯಾರಿಕೆ.

3.ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ

ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ ಅಥವಾ ಲ್ಯಾಪ್‌ಟಾಪ್‌ ವಿತರಣೆ

4.ಪ್ರವಾಹದಂಥ ನೈಸರ್ಗಿಕ ವಿಪತ್ತಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ 15 ಲಕ್ಷ ರೂ.ವರೆಗೂ ಉಚಿತ ವಿಮೆ

5.ಎಲ್ಲಾ ವಿದ್ಯಾರ್ಥಿಗಳಿಗೂ ಆಂಗ್ಲ ಮಾಧ್ಯಮ ಶಿಕ್ಷಣ ಸೌಲಭ್ಯ, ಈ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ

6.ರಾಜ್ಯದ 1 ಕೋಟಿ ಕುಟುಂಬಗಳಿಗೆ 500 ರೂ.ಗೆ ಸಬ್ಸಿಡಿ ದರದಲ್ಲಿ ಗ್ಯಾಸ್‌ ಸಿಲಿಂಡರ್‌

7.ಹಳೆ ಪಿಂಚಣಿ ಪದ್ಧತಿ ಜಾರಿ, ಈ ಮೂಲಕ ಪಿಂಚಣಿಯಿಂದ ವಂಚಿತರಾದವರಿಗೆ ಪೆನ್ಷನ್‌

ಈ ಘೋಷಣೆಗಳ ಮೂಲಕ ರಾಜಸ್ಥಾನ ಕಾಂಗ್ರೆಸ್ ಕರ್ನಾಟಕ ಮಾದರಿ ಚುನಾವಣಾ ಕಸರತ್ತು ನಡೆಸಿದೆ.

Leave a Comment