ಬಂಟ್ವಾಳ : ಎರಡು ತಂಡಗಳ ನಡುವೆ ಕೆಲ ದಿನಗಳ ಹಿಂದೆ ನಡೆದ ಜಗಳ ಚೂರಿ ಇರಿತದ ಹಂತದವರೆಗೆ ಹೋಗಿದ್ದು, ಹುಲಿವೇಷ ಟೀಂ ಗಲಾಟೆಯಲ್ಲಿ ಮೂವರಿಗೆ ಚೂರಿ ಇರಿದ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೆಲ್ಕಾರ್ ನಲ್ಲಿ ನಡೆದಿದೆ. ಗುರುವಾರ ತಡರಾತ್ರಿ ನಡೆದ ಘಟನೆಯಲ್ಲಿ ತಂಡಗಳ ನಡುವೆ ವೈಯಕ್ತಿಕ ಕಲಹದ ಮುಂದುವರಿದ ಭಾಗವಾಗಿ ಮೂವರ ಮೇಲೆ ಮತ್ತೊಂದು ತಂಡದ ಸದಸ್ಯರು ಇರಿದಿದ್ದಾಗಿ ಹೇಳಲಾಗಿದ್ದು, ಘಟನೆಯಿಂದ ಮೂವರು ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಧವಾರ ರಾತ್ರಿ ಪಾಣೆಮಂಗಳೂರು ಶಾರದೋತ್ಸವ ಮೆರವಣಿಗೆ ವೇಳೆ ಎರಡು ತಂಡಗಳ ನಡುವೆ ನಡೆದ ಗಲಾಟೆ ಚೂರಿ ಇರಿತದವರೆಗೆ ಮುಂದುವರಿದಿದೆ. ಕೆಲ ವರ್ಷಗಳ ಹಿಂದೆ ಜೊತೆಯಾಗಿಯೇ ಹುಲಿವೇಷ ಹಾಕಿ ಶಾರದ ವಿಸರ್ಜನೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಯುವಕರ ತಂಡ ಯಾವುದೋ ವಿಚಾರಕ್ಕೆ ಇಬ್ಬಾಗವಾಗಿತ್ತು. ಇದೀಗ ಎರಡು ತಂಡಗಳಾಗಿ ಹುಲಿ ವೇಷವನ್ನು ಹಾಕಲಾಗುತ್ತಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶಾರದ ವಿಸರ್ಜನೆ ವೇಳೆ ಮೆರವಣಿಗೆಯಲ್ಲಿ ಈ ಎರಡು ತಂಡಗಳ ನಡುವೆ ಗಲಾಟೆ ನಡೆದಿದ್ದು, ಮುಂದುವರಿದ ಭಾಗವಾಗಿ ನಿನ್ನೆ ಮೆಲ್ಕಾರ್
ಜಂಕ್ಷನ್ ಕಲ್ಲಿ ಒಂದು ತಂಡದ ಸದಸ್ಯರು ಬ್ಯಾನರ್ ತೆರವು ಮಾಡುತ್ತಿದ್ದ ವೇಳೆ ಇನ್ನೊಂದು ತಂಡ ಸ್ಥಳಕ್ಕೆ ಬಂದು ಹಲ್ಲೆ ನಡೆಸಿ ಚೂರಿಯಿಂದ ಇರಿದು ಪರಾರಿಯಾಗಿದೆ.
ಬೋಳಂಗಡಿ ನಿವಾಸಿಗಳಾದ ದೇವದಾಸ್, ಸಂದೀಪ್ , ಶಂಕರ್ ಚೂರಿ ಇರಿತಕ್ಕೊಳಗಾದವರು. ಬೋಳಂಗಡಿ ನಿವಾಸಿ ಶೋಧನ್, ಕಲ್ಲಡ್ಕ ನಿವಾಸಿ ಯತೀಶ್, ಮೆಲ್ಕಾರ್ ನಿವಾಸಿಗಳಾದ ಚೇತನ್, ಪ್ರಸನ್ನ, ಪ್ರದೀಪ್ ಮತ್ತು ಪ್ರಕಾಶ್ ಅವರ ತಂಡ ಸೇರಿಕೊಂಡು ಹಲ್ಲೆ ಮಾಡಿದ್ದಲ್ಲದೇ ಚೂರಿಯಿಂದ ಇರಿದಿದ್ದಾರೆ ಎಂದು ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.














