ನವದೆಹಲಿ, ಜನವರಿ 25: ಭಾರತದಲ್ಲಿ ಜನವರಿ 26 ಅನ್ನು ಗಣರಾಜ್ಯೋತ್ಸವ ದಿನ ಎಂದು ಆಚರಿಸಲಾಗುತ್ತದೆ. 1949ರ ನವೆಂಬರ್ 26ರಂದು ರಚಿಸಲಾದ ದೇಶದ ಸಂವಿಧಾನವನ್ನು 1950ರ ಜನವರಿ 26ರಂದು ಅಂಗೀಕರಿಸಲಾಯಿತು. ಈ ದಿನವನ್ನು ದೇಶದ ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ.
ಈ ಸಲ ಗಣರಾಜ್ಯದ ದಿನವನ್ನು ಹಬ್ಬಕ್ಕಿಂತ ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನದಂದು ಭಾರತೀಯ ಸೇನಾ ಪಡೆಗಳು ಮತ್ತು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಉತ್ಸಾಹವನ್ನು ಪ್ರದರ್ಶಿಸಲಾಗುತ್ತದೆ.
ಈ ಬಾರಿ ಕೊರನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾರಣದಿಂದ ಈ ವರ್ಷ ಯಾವುದೇ ವಿದೇಶಿ ಅತಿಥಿಗಳಿಗೆ ಆಹ್ವಾನವನ್ನು ನೀಡಿಲ್ಲ. ಅಲ್ಲದೆ 30 ನಿಮಿಷಗಳ ಕಾಲ ತಡವಾಗಿ ಪರೇಡ್ ಆರಂಭವಾಗಲ್ಲಿದ್ದು, ಪರೇಡ್ ಪ್ರಾರಂಭವಾಗುವ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಾಣ ಕಳೆದುಕೊಂಡ ಭದ್ರತಾ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊವಿಡ್19 ನಿರ್ಬಂಧಗಳ ಹಿನ್ನೆಲೆ ಗಣರಾಜ್ಯೋತ್ಸವದ ದಿನವನ್ನು ಕಡಿಮೆ ಅವಧಿಯಲ್ಲಿ ಆಚರಿಸಲಾಗುತ್ತದೆ. ಈ ಮೆರವಣಿಗೆಯ ತಂಡವು ಚಿಕ್ಕದಾಗಿರುತ್ತದೆ. ಸಾಂಸ್ಕೃತಿಕ ಪ್ರದರ್ಶನ ಕಡಿಮೆಯಾಗಿರಲಿದ್ದು, ಬುಧವಾರ ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಸಾಮಾನ್ಯವಾಗಿ ಮೆರವಣಿಗೆಯು 9 ಗಂಟೆಗೆ ಪ್ರಾರಂಭವಾಗಲಿದ್ದು, 11.30ರ ಸುಮಾರಿಗೆ ಕೊನೆಯಾಗುತ್ತದೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾರಣದ ಹಿನ್ನೆಲೆ ಗಣರಾಜ್ಯೋತ್ಸವದಲ್ಲಿ ಪ್ರೇಕ್ಷಕರ ಪ್ರಮಾಣವನ್ನು 24,000ಕ್ಕೆ ತಗ್ಗಿಸಲಾಗಿದೆ.
ರಕ್ಷಣಾ ಸಂಸ್ಥೆಯ ಮೂಲಗಳ ಪ್ರಕಾರ ಕೊವಿಡ್-19 ಭೀತಿಗೂ ಮೊದಲು ಅಂದರೆ 2020ರಲ್ಲಿ ಗಣರಾಜ್ಯೋತ್ಸವ ಆಚರಿಸುವ ವೇಳೆ 1.25 ಲಕ್ಷ ಪ್ರೇಕ್ಷಕರಿಗೆ ಪರೇಡ್ ವೀಕ್ಷಿಸಲು ಅನುಮತಿ ನೀಡಲಾಗುತ್ತಿತ್ತು.
ಈ ವರ್ಷದ ಗಣರಾಜ್ಯೋತ್ಸವ ಪರೇಡ್ ಅನ್ನು ಡಿಡಿ ನ್ಯೂಸ್ ಮತ್ತು ಅದರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನೀವು ಲೈವ್ ಆಗಿ ವೀಕ್ಷಿಸಬಹುದು. ಬಹುತೇಕ ಖಾಸಗಿ ಸುದ್ದಿ ವಾಹಿನಿಗಳು ಗಣರಾಜ್ಯೋತ್ಸವ ಪರೇಡ್ ಅನ್ನು ನೇರ ಪ್ರಸಾರ ಮಾಡಲಿವೆ.
ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳು ಒಟ್ಟು 56 ಪ್ರಸ್ತಾವನೆಗಳನ್ನು ಸಲ್ಲಿಸಿದ್ದು, ಈ ಪೈಕಿ 21 ಅನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ದೆಹಲಿ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಕೋಷ್ಟಕಗಳು ಈ ವರ್ಷ ಮೆರವಣಿಗೆಯ ಭಾಗವಾಗುವುದಿಲ್ಲ. ಕೆಂಪು ಕೋಟೆಗೆ ಸಾಮಾನ್ಯ ಮಾರ್ಗ ಅನುಸರಿಸುವ ಬದಲು ಈ ವರ್ಷ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ತುಕಡಿಗಳನ್ನು ನಿಯೋಜಿಸಲಾಗುತ್ತದೆ. ಈ ಪರೇಡ್ ಮತ್ತು ಕಾರ್ಯಕ್ರಮಗಳ ಅವಧಿಯಲ್ಲಿ ಕೊವಿಡ್-19 ನಿರ್ಬಂಧಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ.














