ಉತ್ತರ ಪ್ರದೇಶ: ಕನ್ವರ್ ಯಾತ್ರೆ ವೇಳೆ ಅಂಗಡಿಗಳ ಮುಂಭಾಗದಲ್ಲಿ ಮಾಲೀಕರ ಹೆಸರು ಪ್ರದರ್ಶಿಸಲು ಸರಕಾರ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ.

Coastal Bulletin
ಉತ್ತರ ಪ್ರದೇಶ: ಕನ್ವರ್ ಯಾತ್ರೆ ವೇಳೆ ಅಂಗಡಿಗಳ ಮುಂಭಾಗದಲ್ಲಿ ಮಾಲೀಕರ ಹೆಸರು ಪ್ರದರ್ಶಿಸಲು ಸರಕಾರ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ.

ನವದೆಹಲಿ: ಉತ್ತರ ಪ್ರದೇಶದ ಕನ್ವರ್ ಯಾತ್ರೆಯ ಮಾರ್ಗದಲ್ಲಿ ಅಂಗಡಿಗಳ ಮಾಲೀಕರು ತಮ್ಮ ಹೆಸರುಗಳನ್ನೂ ಹಾಕಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆ ನೀಡಿದೆ. ಮಧ್ಯಂತರ ಆದೇಶ ನೀಡಿದ ಸುಪ್ರೀಂ ಕೋರ್ಟ್‌, ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳಲ್ಲಿ ಸಿಗುವಂಥ ಆಹಾರಗಳ ವಿವರಗಳನ್ನು ಪ್ರದರ್ಶನ ಮಾಡಿದರೆ ಸಾಕು, ಮಾಲೀಕರ ಹೆಸರನ್ನು ಪೋಸ್ಟರ್‌ನಲ್ಲಿ ಹಾಕುವ ಅಗತ್ಯವವಿಲ್ಲ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸರ್ಕಾರಗಳಿಗೆ 'ನಾಮಫಲಕ ಆದೇಶ' ಹೊರಡಿಸಿದ್ದರ ಕುರಿತು ನೋಟಿಸ್ ಜಾರಿ ಮಾಡಿದೆ. ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಅಸೋಸಿಯೇಷನ್ ​​ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಎಂಬ ಎನ್‌ಜಿಒ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

ಈ ಆದೇಶ ಹೊರಡಿಸಿದ್ದರ ಕಾರಣವೇನು ಅನ್ನೋದು ಕೂಡ ಮುಖ್ಯವಾಗಿದೆ. ಆಹಾರದ ಮೆನ್ಯು ನೋಡಿ ನೀವು ರೆಸ್ಟೋರೆಂಟ್‌ಗೆ ಹೋಗುತ್ತೀರಿ. ಅಲ್ಲಿ ಯಾರು ಸರ್ವ್‌ ಮಾಡುತ್ತಿದ್ದಾರೆ ಎನ್ನುವುದನ್ನು ನೋಡಿಕೊಂಡು ಯಾರೂ ರೆಸ್ಟೋರೆಂಟ್‌ಗೆ ಹೋಗೋದಿಲ್ಲ ಎಂದು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದದ ವೇಳೆ ಹೇಳಿದ್ದಾರೆ. ಯಾತ್ರೆಗಳು ದಶಕಗಳಿಂದ ನಡೆಯುತ್ತಿದ್ದು, ಎಲ್ಲಾ ಧರ್ಮದ ಜನರು ತಮ್ಮ ಯಾತ್ರೆಯಲ್ಲಿ ಕನ್ವರಿಯಾರಿಗೆ ಸಹಾಯ ಮಾಡುತ್ತಿದ್ದಾರೆ ಎಂದಿದ್ದಾರೆ.

ವಿವಾದಗಳ ನಡುವೆಯೂ ಉತ್ತರ ಪ್ರದೇಶ ಸರಕಾರ ವಿಧಿಸಿರುವ ಕನ್ವರ್‌ ಯಾತ್ರೆ ನಿಯಮಗಳನ್ನು ಜಾರಿಗೊಳಿಸಲು ಅಲ್ಲಿನ ಹೊಟೇಲ್‌ ಮಾಲಕರು ಮುಂದಾಗಿದ್ದರು. ಇದರ ಪರಿಣಾಮ, ಹಿಂದೂಗಳ ಹೊಟೇಲ್‌ಗ‌ಳಲ್ಲಿರುವ ಮುಸ್ಲಿಂ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದ್ದರೆ, ಇತ್ತ ಮುಸ್ಲಿಂ ಮಾಲಕತ್ವದ ಹೊಟೇಲ್‌ಗ‌ಳು ವ್ಯಾಪಾರವಿಲ್ಲದೇ ಬೀಗ ಹಾಕಲು

ಯೋಜಿಸಿವೆ.

ಸೋಮವಾರದಿಂದ ಯಾತ್ರೆ ಆರಂಭಗೊಂಡಿದ್ದು, ಕನ್ವರಿಗಳು ಉತ್ತರಪ್ರದೇಶದ ಮುಜಾಫ‌ರ್‌ನಗರದ ಮಾರ್ಗವಾಗಿ ಹಾದು ಹೋಗುತ್ತಾರೆ. ಈ ವೇಳೆ ಯಾತ್ರಾ ಮಾರ್ಗದ ಎಲ್ಲಾ ಹೊಟೇಲ್‌ಗ‌ಳ ಮಾಲಕರ ಹೆಸರು ಬಹಿರಂಗಪಡಿಸಿ ಎಂದು ಸರಕಾರ ಸೂಚಿಸಿದೆ. ಅದರಂತೆ, ಹಲವು ಹೊಟೇಲ್‌ಗ‌ಳಲ್ಲಿ ಮಾಲಕರ ಹೆಸರು ಹಾಕಿದ್ದರೆ, ಇನ್ನು ಕೆಲವರು ತಮ್ಮ ಉದ್ಯೋಗಿಗಳಲ್ಲಿ ಮುಸ್ಲಿಮರಿಲ್ಲ ಎಂದು ಖಚಿತಪಡಿಸಲು ಅವರ ಆಧಾರ್‌ಕಾರ್ಡ್‌ಗಳನ್ನೇ ಪ್ರದರ್ಶಿಸಿದ್ದಾರೆ. ಮುಸ್ಲಿಂ ಉದ್ಯೋಗಿಗಳಿದ್ದ ಹೊಟೇಲ್‌ಗ‌ಳಲ್ಲಿ ಅವರಿಗೆ ರಜೆ ನೀಡಿದ್ದರೆ, ಕೆಲವರನ್ನು ವಜಾಗೊಳಿಸಲಾಗಿದೆ. ಇತ್ತ ಮುಸ್ಲಿಮರ ಹೊಟೇಲ್‌ಗ‌ಳು ಕೂಡ ವ್ಯಾಪಾರ ನಷ್ಟದ ಭೀತಿ ಎದುರಿಸುತ್ತಿದ್ದು, ಉದ್ಯೋಗಿಗಳಿಗೆ ರಜೆ ನೀಡಿವೆ.

ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಲ್ಲಿ ಕನ್ವರ್‌ ಯಾತ್ರೆ ನಡೆದಿರಲಿಲ್ಲ. ಈ ಯಾತ್ರೆಯ ವೇಳೆ ಶಿವಭಕ್ತರು ಗಂಗಾ ಜಲವನ್ನು ಸಂಗ್ರಹಿಸಿ ಅದನ್ನು ದೇಗುಲಕ್ಕೆ ಕೊಂಡೊಯ್ದು ಸಮರ್ಪಿಸುತ್ತಾರೆ.

Leave a Comment