ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿಂದು ಭಗವಾನ್ ಶ್ರೀರಾಮ ವಿರಾಜಮಾನರಾಗಿದ್ದಾನೆ. ಬಾಲ ರಾಮನ ಮೂರ್ತಿಯ ಪ್ರತಿಷ್ಠಾಪನೆ ಅಂತ್ಯಗೊಂಡಿದ್ದು, ನಾಳೆಯಿಂದ ರಾಮ ಭಕ್ತರು ಅಯೋಧ್ಯೆ ರಾಮನ ಕಣ್ತುಂಬಿಕೊಳ್ಳಲಿದ್ದಾರೆ. ಸುಮಾರು 500 ವರ್ಷಗಳ ಸುದೀರ್ಘ ಹೋರಾಟವಾಗಿ ಅಯೋಧ್ಯೆಯಲ್ಲಿ ರಾಮ ನೆಲೆಗೊಂಡಿದ್ದಾನೆ. ಆದರೆ ರಾಮಮಂದಿರ ಲೋಕಾರ್ಪಣೆಯ ದಿನವೇ ದೇಶದಲ್ಲಿ ಮತ್ತೊಂದು ರಾಮ ದೇವಾಲಯವೂ ಉದ್ಘಾಟನೆಗೊಂಡಿದೆ.
ಅಯೋಧ್ಯೆ ರಾಮ ಮಂದಿರದಲ್ಲಿ ಮಧ್ಯಾಹ್ನ 12.20ಕ್ಕೆ ಸರಿಯಾಗಿ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭವಾಗಿದ್ದು 12:45ರವರೆಗೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ವಿಧಿ ವಿಧಾನಗಳನ್ನು ಪೂರೈಸಿದರು. ಸುಮಾರು 2 ಗಂಟೆಗಳ ಕಾಲ 25 ರಾಜ್ಯಗಳ ವಿವಿಧ ಸಂಗೀತ ವಾದ್ಯಗಳ ಕಾರ್ಯಕ್ರಮ ನಡೆಯಿತು. 50 ದೇಶಗಳನ್ನು ಪ್ರತಿನಿಧಿಸುವ 92 ವಿಶೇಷ ಆಹ್ವಾನಿತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಕೋಟ್ಯಂತರ ಭಕ್ತರು ಅಯೋಧ್ಯೆ ರಾಮನನ್ನು ಕಣ್ತುಂಬಿಕೊಂಡಿದ್ದಾರೆ.
ಭಾರತದ ಆತ್ಮದ ಪ್ರತಿ ಕಣ ಕಣದಲ್ಲೂ ಶ್ರೀರಾಮ ಇದ್ದಾನೆ. ಪ್ರತಿ ಯುಗದ ಜನರು ರಾಮನನ್ನು ಗೆಲ್ಲಿಸಿದ್ದಾರೆ. ರಾಮರಸ ನಮ್ಮ ಜೀವನದ ರೀತಿ, ಅದು ನಿರಂತರವಾದದ್ದು. ರಾಮಮಂದಿರ ನಿರ್ಮಾಣ ಕೇವಲ ವಿಜಯ ಅಲ್ಲ, ವಿನಯದಿಂದ ಕೂಡಿದೆ. ಶ್ರೀರಾಮ ಬೆಂಕಿಯಲ್ಲ, ಶ್ರೀರಾಮ ಶಕ್ತಿ. ಶ್ರೀರಾಮ ವಿವಾದ ಅಲ್ಲ, ರಾಮ ಸಮಾಧಾನ. ಶ್ರೀರಾಮ ವರ್ತಮಾನ ಅಲ್ಲ, ಅನಂತಕಾಲ. ಅಯೋಧ್ಯೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಶ್ರೀರಾಮ ಪ್ರತಿಷ್ಠಾಪನೆಯಾಗಿದೆ. ಶ್ರೀರಾಮ ಭಾರತದ ಚೇತನ ಅಷ್ಟೇ ಅಲ್ಲ ಚಿಂತನ ಕೂಡ. ರಾಮ ವ್ಯಾಪಕ, ವಿಶ್ವ, ವಿಶ್ವಾತ್ಮ, ಪ್ರವಾಹ, ಪ್ರಭಾವ ಕೂಡ ಆಗಿದ್ದಾನೆ. ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಆಗಿದೆ, ಈಗ ಮುಂದೆ ಏನು? ಕಾಲಚಕ್ರ ಬದಲಾಗುತ್ತಿದೆ. ಮುಂದಿನ ಪೀಳಿಗೆ ನಮ್ಮ ಕಾರ್ಯವನ್ನು ಸಾವಿರ ವರ್ಷ ಕಾಲ ನೆನಪು ಇಡುತ್ತವೆ. ದೇವನಿಂದ ದೇಶ, ರಾಮನಿಂದ ರಾಷ್ಟ್ರದ ಚೇತನ ವಿಸ್ತಾರಗೊಳ್ಳಬೇಕಿದೆ. ಭವ್ಯ ಭಾರತದ ಆಧಾರ ಪ್ರಭು ಶ್ರೀರಾಮ ಆಗುತ್ತಾನೆ ಎಂದು ಮೋದಿ ಹೇಳಿದರು.
ಕರ್ನಾಟಕದ ಬಿದರಹಳ್ಳಿ ಹೋಬಳಿಯಲ್ಲಿ ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿರುವ ಸಕುಟುಂಬ ಸಮೇತ ರಾಮ ಸೀತ ಲಕ್ಷ್ಮಣ ದೇವಾಲಯ & 33 ಅಡಿ ಎತ್ತರ ಏಕಶಿಲೆ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು
ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾರೆ. ಹಾಗೇ ಉದ್ಘಾಟನೆ ಬಳಿಕ ಮಹಾ ಕುಂಭಾಭಿಷೇಕದಲ್ಲಿ ಪಾಲ್ಗೊಂಡಿದ್ದ ಸಿಎಂ ಶ್ರೀರಾಮನ ಬಗ್ಗೆ ಮಾತನಾಡಿದ್ದಾರೆ.
ಅಧರ್ಮದ & ಅಮಾನವೀಯ ಕೆಲಸ ಮಾಡಿ ನಾಟಕೀಯ ಪೂಜೆ ಮಾಡಿದರೆ ಆ ಪೂಜೆಯನ್ನು ದೇವರು ಒಪ್ಪಿಕೊಳ್ಳಲ್ಲ. ಸಕಲ ಜೀವಗಳೂ ಸಮಾನತೆ, ಪ್ರೀತಿಯಿಂದ ಬಾಳಬೇಕು ಎನ್ನುವುದು ಆದರ್ಶ ಪುರುಷ ಶ್ರೀರಾಮನ ಆಶಯ. ನಾನು ನಾಸ್ತಿಕನಲ್ಲ - ಆಸ್ತಿಕ ನಮ್ಮೂರಲ್ಲೂ ರಾಮನ ಗುಡಿ ಕಟ್ಟಿಸಿದ್ದೇನೆ. ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ರಾಮನ ಗುಡಿ ಇವೆ. ಪ್ರತಿಯೊಬ್ರೂ ಅವರ ನಂಬಿಕೆಯಂತೆ ರಾಮನನ್ನು ಪೂಜಿಸುತ್ತಾರೆ ಹಾಗೂ ಗುಡಿ ಕಟ್ಟುತ್ತೇವೆ, ಪೂಜಿಸುತ್ತೇವೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಯಾವುದೇ ಧರ್ಮ ಜಾತಿ ಮತ್ತು ಧರ್ಮ ಆಧಾರದ ಮನುಷ್ಯ ದ್ವೇಷವನ್ನ ಹೇಳಲ್ಲ. ಶ್ರೀರಾಮ ಸಮಾಜಮುಖಿ ಆಗಿದ್ದರು. ಒಬ್ಬ ಮಡಿವಾಳನ ಮಾತಿಗೆ ಬೆಲೆ ಕೊಟ್ಟರು. ಪಿತೃವಾಕ್ಯ ಪಾಲನೆಗೆ ವನ ವಾಸಕ್ಕೆ ಹೋದರು. ಶ್ರೀರಾಮ, ಲಕ್ಷ್ಮಣ, ಸೀತೆ, ಆಂಜನೇಯರ ಬೇರ್ಪಡಿಸಲು ಸಾಧ್ಯ ಇಲ್ಲ. ಇವರೆಲ್ಲಾ ಸಕುಟುಂಬಸ್ಥರು ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಕುವೆಂಪು ಅವರ ಸರ್ವ ಜನಾಂಗದ ಶಾಂತಿ ತೋಟ ಎಂಬ ಆಶಯ ಶ್ರೀರಾಮನ ಆದರ್ಶ & ವ್ಯಕ್ತಿತ್ವದಲ್ಲಿದೆ ಎಂದರು. ಮನುಷ್ಯ ಮನುಷ್ಯನ ದ್ವೇಷಿಸಬಾರದು ಎಂಬುದೇ ರಾಮಾಯಣ ಮಹಾಭಾರತದ ಸಂದೇಶ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಪರಿಶಿಷ್ಠ ಪಂಗಡ ಸಮುದಾಯದ ವಾಲ್ಮೀಕಿ ಅವ್ರು ರಾಮಾಯಣವನ್ನು ಬರೆದು ವಿಶ್ವಕ್ಕೆ ಕೊಟ್ರು, ದೇವರು ನಮ್ಮ ಆತ್ಮ & ಶರೀರದಲ್ಲೇ ಇದ್ದಾನೆ ಎಂದು ಬಸವಣ್ಣ ಅವರು ನುಡಿದರು. ದೇಹವೇ ದೇಗುಲ ಎನ್ನುವ ಸಂದೇಶವನ್ನ ಮನುಷ್ಯ ಪ್ರಪಂಚಕ್ಕೆ ನೀಡಿದ್ರು. ಜೈ ಶ್ರೀರಾಮ್ ಎನ್ನುವುದು ಯಾರದ್ದೋ ಖಾಸಗಿ ಸ್ವತ್ತಲ್ಲ ಅದು ಪ್ರತಿಯೊಬ್ಬ ಭಕ್ತರ ಸ್ವತ್ತು ಜೈ ಶ್ರೀರಾಮ್ ಎಂಬ ಘೋಷಣೆ ಮೂಲಕ ನನ್ನ ಮಾತು ಮುಗಿಸುತ್ತೇನೆ ಎಂದರು ಸಿಎಂ ಸಿದ್ದರಾಮಯ್ಯ.














