ಆಯೋಧ್ಯೆ: ಪ್ರಭು ಶ್ರೀರಾಮಚಂದ್ರ ವನವಾಸ ಮುಗಿಸಿ ಆಯೋಧ್ಯೆಗೆ ಮರಳಿದಾಗ ರಾಮನಗರಿ ಜನ ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಂಡಿದ್ದರು. ಇದೀಗ ದೇಶಾದ್ಯಂತ ಅದೇ ರೀತಿ ಸಂಭ್ರಮ ಮನೆ ಮಾಡಿದೆ. ಸಂಪೂರ್ಣ ಆಯೋಧ್ಯೆ ಕಂಗೊಳಿಸುತ್ತಿದೆ. ರಾಮ ಭಕ್ತರು ಜೈ ಶ್ರೀರಾಮ್ ಘೋಷಣೆಯೊಂದಿಗೆ ಬೀದಿ ಬೀದಿಗಳಲ್ಲಿ ಸಂಭ್ರಮ ಆಚರಿಸುತ್ತಿದ್ದಾರೆ. ಇತ್ತ ಆಯೋಧ್ಯೆ ನಗರ, ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಸಜ್ಜಾಗಿದೆ. ಬೆಳಗ್ಗೆ 10.30ರ ವೇಳೆಗೆ ಮೋದಿ ಆಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೋದಿಯನ್ನು ಬರಮಾಡಿಕೊಳ್ಳಲಿದ್ದಾರೆ.
ಪ್ರಾಣಪ್ರತಿಷ್ಠೆ ನೆರವೇರಿಸಲಿರುವ ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಬಿಗಿಗೊಳಿಸಲಾಗುತ್ತಿದೆ. ಮಧ್ಯಾಹ್ನ 12.20ಕ್ಕೆ ಬಾಲರಾಮನ ಪ್ರಾಣಪ್ರತಿಷ್ಠೆ ವಿಧಿವಿಧಾನ ಆರಂಭಗೊಳ್ಳಲಿದೆ. 12.55ಕ್ಕೆ ಪ್ರಾಣಪ್ರತಿಷ್ಠೆ ಪೂಜಾ ಕೈಂಕರ್ಯ ಅಂತ್ಯಗೊಂಡು ಮಂದಿರ ಲೋಕಾರ್ಪಣೆಗೊಳ್ಳಲಿದೆ.
ಅಯೋಧ್ಯೆಯ ಬೀದಿ ಬೀದಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಆಯೋಧ್ಯೆಯತ್ತ
ಗಣ್ಯರು ಆಗಮಿಸುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಟಾಲಿವುಡ್ ಸ್ಟಾರ್ ರಾಮಚರಣ್ ಸೇರಿದಂತೆ ಸೆಲೆಬ್ರೆಟಿಗಳು ಇದೀಗ ಆಯೋಧ್ಯೆಗೆ ಆಗಮಿಸಿದ್ದಾರೆ. ವಿದೇಶಗಳಿಂದ ಆಗಮಿಸಿದ ಗಣ್ಯರು ರಾಮಜನ್ಮಭೂಮಿ ತಲುಪಿದ್ದಾರೆ. ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಗಣ್ಯರು ಕೆಲವೇ ಕ್ಷಣಗಳಲ್ಲಿ ರಾಮಜನ್ಮಭೂಮಿಗೆ ಆಗಮಿಸಲಿದ್ದಾರೆ.















