ಛತ್ತೀಸ್​ಗಢದಲ್ಲಿ ಎರಡು ಪ್ರತ್ಯೇಕ ಎನ್​ಕೌಂಟರ್: 30 ನಕ್ಸಲರ ಹತ್ಯೆ, ಒಬ್ಬ ಭದ್ರತಾ ಸಿಬ್ಬಂದಿ ವೀರಮರಣ: ಮುಂದುವರಿದ ಶೋಧ ಕಾರ್ಯಾಚರಣೆ

Coastal Bulletin
ಛತ್ತೀಸ್​ಗಢದಲ್ಲಿ ಎರಡು ಪ್ರತ್ಯೇಕ ಎನ್​ಕೌಂಟರ್: 30 ನಕ್ಸಲರ ಹತ್ಯೆ, ಒಬ್ಬ ಭದ್ರತಾ ಸಿಬ್ಬಂದಿ ವೀರಮರಣ: ಮುಂದುವರಿದ ಶೋಧ ಕಾರ್ಯಾಚರಣೆ

ಬಿಜಾಪುರ್ (ಛತ್ತೀಸ್‌ಗಢ): ಛತ್ತೀಸ್‌ಗಢದಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 30 ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. ಬಿಜಾಪುರ ಜಿಲ್ಲೆಯಲ್ಲಿ 26 ನಕ್ಸಲೀಯರನ್ನು ಹತ್ಯೆ ಮಾಡಲಾಗಿದ್ದರೆ, ಕಂಕೇರ್ ಪ್ರದೇಶದಲ್ಲಿ ಬಿಎಸ್‌ಎಫ್ ಮತ್ತು ರಾಜ್ಯ ಪೊಲೀಸರ ಡಿಆರ್‌ಜಿ ಸಿಬ್ಬಂದಿಯ ಜಂಟಿ ತಂಡ ನಾಲ್ವರು ಮಾವೋವಾದಿಗಳನ್ನು ಕೊಂದು ಹಾಕಿದ್ದಾರೆ. ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಪೊಲೀಸ್ ಸಹ ಹುತಾತ್ಮರಾಗಿದ್ದಾರೆ.

ಬಿಜಾಪುರ ಎನ್‌ಕೌಂಟರ್‌: ಬಸ್ತಾರ್ ವಿಭಾಗದ ವ್ಯಾಪ್ತಿಯ ಬಿಜಾಪುರ ಮತ್ತು ಕಂಕೇರ್‌ನಲ್ಲಿ ಪ್ರತ್ಯೇಕ ಎನ್‌ಕೌಂಟರ್‌ಗಳು ನಡೆಯುತ್ತಿವೆ ಎಂದು ಬಸ್ತಾರ್ ರೇಂಜ್ ಐಜಿ ಸುಂದರರಾಜ್ ಪಿ ಹೇಳಿದ್ದಾರೆ. ಬಿಜಾಪುರ ಡಿಆರ್‌ಜಿ, ಸುಕ್ಮಾ ಡಿಆರ್‌ಜಿ, ಕೋಬ್ರಾ ಸಿಆರ್‌ಪಿಎಫ್ ಪಡೆಗಳು ಬಿಜಾಪುರ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದವು. ಬಿಜಾಪುರ ದಾಂತೇವಾಡ ಸುಕ್ಮಾದ ಗಡಿ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದೆ. ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 26 ನಕ್ಸಲೀಯರು ಹತರಾಗಿದ್ದಾರೆ. ಬಿಜಾಪುರದ ಡಿಆರ್‌ಜಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಭದ್ರತಾ ಪಡೆಗಳು ನಿರಂತರ ಶೋಧ ನಡೆಸುತ್ತಿವೆ ಎಂದು ಅವರು ಹೇಳಿದ್ದಾರೆ.

ಎರಡೂ ಎನ್‌ಕೌಂಟರ್‌ಗಳಲ್ಲಿ ಇಲ್ಲಿಯವರೆಗೆ 30 ನಕ್ಸಲೀಯರು ಹತ: ಬಿಜಾಪುರ ಮತ್ತು ಕಂಕೇರ್‌ನಲ್ಲಿ ನಡೆದ ಎರಡು ನಕ್ಸಲ್ ಎನ್‌ಕೌಂಟರ್‌ಗಳಲ್ಲಿ ಇದುವರೆಗೆ 30 ನಕ್ಸಲೀಯರು ಹತರಾಗಿದ್ದಾರೆ ಎಂಬುದನ್ನು ಬಸ್ತಾರ್ ಐಜಿ ಸುಂದರರಾಜ್ ಪಿ ಖಚಿತಪಡಿಸಿದ್ದಾರೆ. ಬಿಜಾಪುರದಲ್ಲಿ ಈವರೆಗೆ 26 ನಕ್ಸಲೀಯರ ಮೃತದೇಹಗಳು ಪತ್ತೆಯಾಗಿವೆ. ಕಂಕೇರ್ ಎನ್‌ಕೌಂಟರ್‌ನಲ್ಲಿ ಇದುವರೆಗೆ 4 ನಕ್ಸಲೀಯರ ಮೃತದೇಹಗಳು ಪತ್ತೆಯಾಗಿವೆ. ಎನ್‌ಕೌಂಟರ್ ಸ್ಥಳದಲ್ಲಿ ಇನ್ನೂ ಶೋಧ ನಡೆಯುತ್ತಿದೆ. ಎನ್‌ಕೌಂಟರ್ ಸ್ಥಳದಿಂದ ನಕ್ಸಲೀಯರ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುಂದರ್​​​​ ರಾಜ್​ ಪಿ ಮಾಹಿತಿ ನೀಡಿದ್ದಾರೆ.

ಬೆಳ್ಳಗ್ಗೆಯೇ ನಡೆದ ಎನ್​​​ಕೌಂಟರ್​:

ಬಸ್ತಾರ್ ವಿಭಾಗದ ಬಿಜಾಪುರ-ದಂತೇವಾಡ ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ

ಎನ್‌ಕೌಂಟರ್ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 18 ಮಂದಿ ನಕ್ಸಲರು ಸಾವನ್ನಪ್ಪಿದ್ದು, ಕೊರೊಸ್ಕೊಡೊ ಗ್ರಾಮದಲ್ಲಿ ಮತ್ತೊಂದು ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಈ ಮೊದಲು ತಿಳಿದು ಬಂದಿತ್ತು. ಅದೀಗ 26ಕ್ಕೆ ಏರಿಕೆಯಾಗಿದೆ.

ಮೃತ ಭದ್ರತಾ ಸಿಬ್ಬಂದಿ ಛತ್ತೀಸ್‌ಗಢ ಪೊಲೀಸರ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ)ಗೆ ಸೇರಿದವರಾಗಿದ್ದು, ಗಂಗಲೂರು ಪೊಲೀಸ್ ಠಾಣಾ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.

ಘಟನಾ ಸ್ಥಳದಿಂದ ನಾಲ್ವರು ನಕ್ಸಲರ ಮೃತದೇಹಗಳ ಜೊತೆಗೆ ಬಂದೂಕುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅದಿಕಾರಿಗಳು ಹೇಳಿದ್ದಾರೆ.

ಐಇಡಿ ಸ್ಪೋಟದಿಂದ ಪಾರು: ಈ ನಡುವೆ ರಾಜ್ಯದ ನಾರಾಯಣಪುರ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ನಕ್ಸಲರು ಐಇಡಿ ಸ್ಪೋಟಿಸಿದ್ದು, ಭದ್ರತಾ ಪಡೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸ್ಪೋಟದಲ್ಲಿ ಭದ್ರತಾ ಸಿಬ್ಬಂದಿಗೆ ಯಾವುದೇ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಆದರೆ, ಮಣ್ಣು ಮತ್ತು ಧೂಳು ಅಪ್ಪಳಿಸಿ ಇಬ್ಬರು ಪೊಲೀಸ್​ ಸಿಬ್ಬಂದಿ ಹಾಗೂ ಓರ್ವ ಅಧಿಕಾರಿಯ ಕಣ್ಣಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಬುಜ್‌ಮದ್ ಪ್ರದೇಶದಲ್ಲಿ ಬೆಳಗಿನ ಜಾವ ಸುಮಾರು 3ಕ್ಕೆ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಘಟಕ ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಜಂಟಿ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆ ಕೈಗೊಂಡಾಗ ಈ ದಾಳಿ ನಡೆದಿದೆ.

Leave a Comment