ಲಂಡನ್ : ಸೆ.8ರಂದು ನಿಧನರಾದ ಬ್ರಿಟನ್ ರಾಣಿ 2ನೇ ಎಲಿಜಬೆತ್ (96) ಅವರ ಅಂತ್ಯಸಂಸ್ಕಾರ ಇಂದು ನಡೆಯಲಿದ್ದು, ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ಭಾರೀ ಸಿದ್ಧತೆ ನಡೆಸಲಾಗಿದೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ 500ಕ್ಕೂ ಹೆಚ್ಚು ಜಾಗತಿಕ ನಾಯಕರು ರಾಣಿಗೆ ಅಂತಿಮ ವಿದಾಯ ನೀಡಲು ಲಂಡನ್‌ಗೆ ಆಗಮಿಸಿದ್ದಾರೆ.
ರಾಣಿಯ ಅಂತ್ಯಸಂಸ್ಕಾರದ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ 10 ದಿನಗಳ ಶೋಕಾಚರಣೆ ಆಚರಿಸಲಾಗುತ್ತಿದ್ದು, ಇಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ. ಬ್ರಿಟನ್ ರಾಜ 3ನೇ ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲಾ ಸೇರಿದಂತೆ ರಾಣಿಯ 5 ಮಕ್ಕಳು, ವಿಲಿಯಂ, ಹ್ಯಾರಿ ಸೇರಿದಂತೆ 8 ಮೊಮ್ಮಕ್ಕಳು ಅವರ ಪತ್ನಿಯರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ಸಾವಿರಾರು ಪೊಲೀಸರು, ಸೇನಾ ಅಧಿಕಾರಿಗಳನ್ನು ನೇಮಿಸಿ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರದ ಮುಖ್ಯಸ್ಥರು ಬಸ್‌ಗಳಲ್ಲಿ ರಾಣಿಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆಗಮಿಸಲಿದ್ದಾರೆ. ಬೈಡೆನ್‌ಗೆ ತಮ್ಮ ವಿಶೇಷ ಭದ್ರತಾ ವಾಹನ 'ಬೀಸ್ಟ್'ನಲ್ಲಿ ಬರಲು ಅನುಮತಿ ನೀಡಲಾಗಿದೆ.
ಪ್ರಸ್ತುತ ಸಂಸತ್‌ನ ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ರಾಣಿಯ ಶವಪೆಟ್ಟಿಗೆ ಇರಿಸಲಾಗಿದ್ದು, ಅದನ್ನು ರಾಯಲ್ ಸ್ಟಾಂಡರ್ಡ್‌ನಲ್ಲಿ ಸುತ್ತಿ ಮೇಲೆ ಕೊಹಿನೂರ್ ವಜ್ರವಿರುವ ಕಿರೀಟವನ್ನಿಡಲಾಗಿದೆ. ಇದನ್ನು ಇಂದು ಭಾರತೀಯ ಕಾಲಮಾನದಂತೆ ಮಧ್ಯಾಹ್ನ 2 ಗಂಟೆಗೆ ಕುದುರೆಗಳಿಂದ ಎಳೆಯಲ್ಪಡುವ ಗನ್ ಕ್ಯಾರೇಜ್‌ನಲ್ಲಿಟ್ಟು ಮೆರವಣಿಗೆ ಮೂಲಕ ವೆಸ್ಟ್‌ಮಿನಿಸ್ಟರ್
ಅಬೆಗೆ ಸಾಗಿಸಲಾಗುವುದು. 7 ಗಂಟೆಗೆ ವೆಸ್ಟ್‌ಮಿನಿಸ್ಟರ್ ಅಬೆಗೆ ರಾಣಿಯ ಶವಪೆಟ್ಟಿಗೆ ಆಗಮನವಾಗಲಿದೆ. 1 ಗಂಟೆಯ ನಂತರ ಶವಪೆಟ್ಟಿಗೆಯನ್ನು ಸೇನಾ ಮೆರವಣಿಗೆಯಲ್ಲಿ ವೆಲ್ಲಿಂಗ್ಟನ್ ಆರ್ಚ್‌ಗೆ ಸಾಗಿಸಲಾಗುವುದು. ಬಳಿಕ ಸಾಯಂಕಾಲ 5:30 ರ ಸುಮಾರು ಸ್ಟೇಟ್ ಹಾರ್ಸ್‌ನಿಂದ ವಿಂಡ್ಸರ್‌ಗೆ ಸಾಗಿಸಲಾಗುವುದು. ರಾತ್ರಿ 12 ಗಂಟೆ ಸುಮಾರಿಗೆ ಅವರ ದೇಹವನ್ನು ಸೇಂಟ್ ಜಾರ್ಜ್ ಚಾಪೆಲ್‌ನ ರಾಯಲ್ ವಾಲ್ಟ್‌ನಲ್ಲಿ, ಕಳೆದ ವರ್ಷ ಮೃತಪಟ್ಟ ಅವರ ಪತಿ ಪ್ರಿನ್ಸ್ ಫಿಲಿಪ್ ಪಕ್ಕದಲ್ಲೇ ಸಮಾಧಿ ಮಾಡಲಾಗುವುದು.
ಎಲಿಜಬೆತ್ ಅಂತ್ಯಸಂಸ್ಕಾರಕ್ಕೆ ವಿಶ್ವದ ವಿವಿಧ ಮೂಲೆಗಳಿಂದ ಲಂಡನ್‌ಗೆ ಕನಿಷ್ಠ 10 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬ್ರಿಟನ್ ರಾಜಧಾನಿಯಲ್ಲಿ ಭಾರೀ ವ್ಯವಸ್ಥೆ ಮಾಡಲಾಗುತ್ತಿದೆ. ಜನರ ಆಗಮನಕ್ಕೆ ಅನುಕೂಲ ಮಾಡಿಕೊಡಲು 250 ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಜೊತೆಗೆ ಅಂತ್ಯಸಂಸ್ಕಾರದ ಇಡೀ ಪ್ರಕ್ರಿಯೆಗೆ ವಿಮಾನಗಳ ಸಂಚಾರದ ಭಾರೀ ಸದ್ದು ತಡೆಗಟ್ಟಲು, ಹೀಥ್ರೂ ವಿಮಾನ ನಿಲ್ದಾಣದಲ್ಲಿ ಸಂಜೆ ಬಳಿಕದ ನೂರಾರು ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ.














