ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ 'ಅಗ್ನಿಪಥ' ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ 8 ರಾಜ್ಯಗಳಿಗೆ ಹರಡಿದೆ. ಈಗ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆಯಲ್ಲಿ ಶೇ. 10 ರಷ್ಟು ಮೀಸಲಾತಿ ಘೋಷಣೆ ಮಾಡಿದೆ.
ಅಗ್ನಿವೀರರಿಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ಅಸ್ಸಾಂ ರೈಫಲ್ಸ್ನಲ್ಲಿ ಶೇ. 10 ರಷ್ಟು ಮೀಸಲಾತಿಯನ್ನು ಕೇಂದ್ರ ಗೃಹ ಸಚಿವಾಲಯ ಘೋಷಣೆ ಮಾಡಿದೆ. ಇದಿಷ್ಟೇ ಅಲ್ಲದೇ, ಎರಡೂ ಅರೆಸೇನಾ ಪಡೆಗಳಲ್ಲಿನ ನೇಮಕಾತಿಯಲ್ಲಿ ಅಗ್ನಿವೀರರಿಗೆ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಮೂರು ವರ್ಷಗಳವರೆಗೆ ಸಡಿಲಿಕೆಯನ್ನು ನೀಡಲಾಗಿದೆ. ಅಗ್ನಿವೀರರ ಮೊದಲ ಬ್ಯಾಚ್ಗೆ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಐದು ವರ್ಷಗಳವರೆಗೆ ಸಡಿಲಿಕೆಯನ್ನು ನೀಡುವುದಾಗಿ ಗೃಹ ಸಚಿವಾಲಯ
ಟ್ವೀಟ್ ಮೂಲಕ ತಿಳಿಸಿದೆ.
ಸಿಎಪಿಎಫ್ಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಘೋಷಿಸಿದ ಕೆಲವೇ ದಿನಗಳಲ್ಲಿ ಈ ಮಹತ್ವದ ಘೋಷಣೆ ಹೊರಬಿದ್ದಿದೆ. ಈಗಾಗಲೇ ಅಗ್ನಿಪಥ ಯೋಜನೆಯ ವಯೋಮಿತಿಯನ್ನು ಕೇಂದ್ರ ಸರ್ಕಾರ 21 ರಿಂದ 23ಕ್ಕೆ ಏರಿಸಿದೆ. ಈ ಮೊದಲು 17 ರಿಂದ 21ರವರೆಗೆ ಇತ್ತು. ಕಳೆದ ಎರಡು ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದ ಕಾರಣ ವಯೋಮಿತಿಯನ್ನು ಏರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
















